ಕರಾಚಿ: ಭಾರತದಿಂದ ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ವಿಷಪ್ರಾಶನದಿಂದಾಗಿ ಅತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಊಹಾಪೋಹಗಳು ಹರಿದಾಡುತ್ತಿವೆ. ಪಾಕಿಸ್ತಾನ ಇನ್ನೂಈ ಸುದ್ದಿಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ.
ದಾವೂದ್ ಇಬ್ರಾಹಿಂನನ್ನು ಆಸ್ಪತ್ರೆಯೊಳಗೆ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ ಎಂದು ಹಲವಾರು ವರದಿಗಳು ಸೂಚಿಸುತ್ತಿವೆ.
1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ಭಾರತದ ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂ ದಶಕಗಳಿಂದ ಪಾಕಿಸ್ತಾನದಲ್ಲಿ ಇದ್ದಾನೆ ಎಂದು ವರದಿಯಾಗಿದೆ. ವಿನಾಶಕಾರಿ ಬಾಂಬ್ ಸ್ಫೋಟಳಿಂದಾಗಿ 250 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು ಮತ್ತು ಸಾವಿರಾರು ಜನರು ಗಾಯಗೊಂಡಿದ್ದರು.
ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿ ಇಬ್ರಾಹಿಂ ವಾಸಿಸುತ್ತಿದ್ದಾನೆ ಎಂದು ಭಾರತೀಯ ಅಧಿಕಾರಿಗಳು ಆಗಾಗ್ಗೆ ಹೇಳುತ್ತಲೇ ಬಂದಿದ್ದಾರೆ. ಆತನ ಇರುವಿಕೆಯನ್ನು ಪಾಕಿಸ್ತಾನ ನಿರಾಕರಿಸುತ್ತಲೇ ಬಂದಿದೆ. ಜನವರಿ 2023 ರಲ್ಲಿ, ಆತನ ಸೋದರಳಿಯ ಇಬ್ರಾಹಿಂ ಪಾಕಿಸ್ತಾನದಲ್ಲಿ ಮರುಮದುವೆಯಾಗಿರುವ ಬಗ್ಗೆ ಮತ್ತು ಕರಾಚಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.