ಉಡುಪಿ: ಉಡುಪಿ ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಷಷ್ಠ್ಯಬ್ಧ ಪ್ರಯುಕ್ತ ಉಡುಪಿಯ ಅಭಿಮಾನಿಗಳಿಂದ ನಡೆದ ಅಭಿವಂದನಾ ಸಮಾರಂಭವನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರೊಂದಿಗೆ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಷಷ್ಠ್ಯಬ್ಧ ಪ್ರಯುಕ್ತ ಲಕ್ಷ ಕೃಷ್ಣ ಮಂತ್ರ ಜಪ ಸಹಿತ ಯಾಗ, ಮತ್ತು ಗೋಸೂಕ್ತ ಯಾಗವು ಪೇಜಾವರ ಮಠಾಧೀಶರೊಂದಿಗೆ ಅದಮಾರು ಕಿರಿಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ನಡೆಸಿಕೊಟ್ಟರು.
ಉಡುಪಿ ಶಾಸಕ ಯಶಪಾಲ್ ಸುವರ್ಣ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿದ್ವಾನ್ ಗೋಪಾಲ ಜೋಯಿಸ ಇರ್ವತ್ತೂರು ಉದ್ಯಮಿ ನಾಗರಾಜ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಜೋಡುಕಟ್ಟೆಯಿಂದ ಶೋಭಾಯಾತ್ರೆಯಲ್ಲಿ ಪೇಜಾವರ ಶ್ರೀಪಾದರನ್ನು ಭವ್ಯವಾದ ರಥದಲ್ಲಿ ಕುಳ್ಳಿರಿಸಿ ಬರಮಾಡಿಕೊಳ್ಳಲಾಯಿತು. ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ತಂಡಗಳು, ಕುಣಿತ ಭಜನೆ, ಕತ್ತಿ ವರಸೆ, ಕೀಲ್ಕುದುರೆ ,ಚೆಂಡೆ ವಾದ್ಯ, ಸ್ಯಾಕ್ಸೋಫೋನ್ ಮೊದಲಾದ ತಂಡದವರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿಮಿತ್ತ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.