ಬ್ರಹ್ಮಾವರ: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಕೊಂಡದೇರ ಪಿ ಗಣಪತಿ ಮತ್ತು ಆಡಳಿತ ಮಂಡಳಿಯ ಸದಸ್ಯರು, ಟೌನ್ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರು ಹಾಗೂ ಕೊಡಗು- ಮಡಿಕೇರಿಯ ಎಲ್ಲಾ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ನಿರ್ದೇಶಕರ ಸಹಿತ ಸುಮಾರು 80 ಸದಸ್ಯರು ಡಿ. 8 ರಂದು ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಯನ ಪ್ರವಾಸ ಕೈಗೊಂಡು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂಘದ ವ್ಯವಹಾರದ ಅಭಿವೃದ್ಧಿ ಕುರಿತು ಸಂಘದ ಅಧ್ಯಕ ಇರ್ಮಾಡಿ ಕೆ.ತಿಮ್ಮಪ್ಪ ಹೆಗ್ಡೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಮಾಹಿತಿ ನೀಡಿದರು. ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಯೋಜನೆಗಳು, ಬ್ಯಾಂಕಿಂಗ್ ವ್ಯವಹಾರ, ಮಾರಾಟ ಮತ್ತು ಸಂಘವು ಬ್ಯಾಂಕಿಂಗ್ ವ್ಯವಹಾರವನ್ನಲ್ಲದೇ ಪಡಿತರ ಹಾಗೂ ರಸಗೊಬ್ಬರ ಮಾರಾಟ ನಡೆಸುತ್ತಿದ್ದು, ರೈತರಿಗೆ ಹಾಗೂ ಬಡ ಕುಟುಂಬಗಳಿಗೆ ನೆರವಾಗುತ್ತಿದೆ. ಸಂಘವು ಕೃಷಿ ಸಾಲಕ್ಕೆ ಆದ್ಯತೆ ನೀಡುತ್ತಿದ್ದು ವರದಿ ಸಾಲಿನಲ್ಲಿ ಬಹಳಷ್ಟು ಮಂದಿ ರೈತ ಸದಸ್ಯರು ಬಡ್ಡಿ ರಹಿತ ಸಾಲದ ಪ್ರಯೋಜನ ಪಡೆದಿರುವ ಬಗ್ಗೆ ಹಾಗೂ ಇತರ ವಿಷಯಗಳ ಕುರಿತು ವಿವರವಾಗಿ ತಿಳಿಸಿದರು.
ಸಂಘದ ಬಗ್ಗೆ ಸಮಗ್ರ ಮಾಹಿತಿ ಪಡೆದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕೊಡಗು ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಚರ್ಚೆಯ ಮೂಲಕ ವಿಚಾರ ವಿನಿಮಯ ಮಾಡಿಕೊಂಡು ಸಂಘದ ವ್ಯವಸ್ಥಿತ ಕಾರ್ಯವೈಖರಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಅಭಿವೃದ್ಧಿಯನ್ನು ಶ್ಲಾಘಿಸಿದರು. ಬಳಿಕ ಸಂಘದ ಉನ್ನತಿ ಸಭಾ ಭವನ ಮತ್ತು ಮಹಾಸಭಾ ಭವನಕ್ಕೆ ಭೇಟಿ ನೀಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್. ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಸ್. ವೆಂಕಟ್ರಾಯ ನಾಯಕ್ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಕಮಲಾಕ್ಷ ಹೆಬ್ಬಾರ್, ಸದಾನಂದ ಪೂಜಾರಿ, ರಾಜೇಶ್ ಮರಕಾಲ, ಉಲ್ಲಾಸ್ ನಾಯಕ್ ಉಪಸ್ಥಿತರಿದ್ದರು.