ಸಂಸತ್ತಿನಲ್ಲಿ ಭದ್ರತಾ ಲೋಪ: 6 ಬಂಧನ; ಆರೋಪಿಗಳ ಮೇಲೆ ಯುಎಪಿಎ ದಾಖಲು

ನವದೆಹಲಿ: ಸಂಸತ್ತಿನ ಲೋಕಸಭೆಯಲ್ಲಿ ಬುಧವಾರದಂದು ಇಬ್ಬರು ವ್ಯಕ್ತಿಗಳು ವೀಕ್ಷಕರ ಗ್ಯಾಲರಿಯಿಂದ ಕೆಳಮನೆಗೆ ಧುಮುಕಿ ಹೊಗೆ ಕ್ಯಾನ್ ಗಳನ್ನು ಸಿಡಿಸಿ ರಂಪಾಟ ಮಾಡಿದ್ದು, ಸದನದಲ್ಲಿದ್ದ ಸಂಸದರೆಲ್ಲರೂ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಳಿಕ ತನಿಖೆ ಮುಂದುವರೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 6 ಜನರನ್ನು ಬಂಧಿಸಲಾಗಿದೆ. ರಂಪಾಟ ನಡೆಸಿದವರು ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್ ಪಡೆದುಕೊಂಡು ಲೋಕಸಭೆಯ ಸದನದೊಳಗೆ ಪ್ರವೇಶಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಕರಣದಲ್ಲಿ ಒಟ್ಟು ಏಳು ಮಂದಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಏಳನೇ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ. ಮೂಲಗಳ ಪ್ರಕಾರ ಆರೋಪಿಗಳು ನಾಲ್ಕು ವರ್ಷಗಳಿಂದ ಪರಸ್ಪರ ಪರಿಚಿತರು ಮತ್ತು ಕೆಲವು ದಿನಗಳ ಹಿಂದೆಯೆ ಈ ಯೋಜನೆ ರೂಪಿಸಿದ್ದರು. ಆರೋಪಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು.

ಏಳನೇ ಆರೋಪಿ ಆರೋಪಿ ಲಲಿತ್ ಝಾ ತೆಲೆಮರೆಸಿಕೊಂಡಿದ್ದು ಈತನನ್ನೂ ಶೀಘ್ರವೇ ಬಂದಿಸಲಾಗುವುದು ಎಂದು ದೆಹಲಿ ಪೊಲೀಸ್ ವಿಶೇಷ ಘಟಕ ಮಾಹಿತಿ ನೀಡಿದೆ. ಮಾಹಿತಿ ಪ್ರಕಾರ, ಸಂಸತ್ ಭವನದ ಒಳಗೆ ಮತ್ತು ಹೊರಗೆ ಸಂಚು ರೂಪಿಸಿದ ಆರೋಪಿಗಳು ಚಂಡೀಗಢದಲ್ಲಿ ಭೇಟಿಯಾಗಿದ್ದಾರೆ. ಚಂಡೀಗಢದಲ್ಲಿ ಭಗತ್ ಸಿಂಗ್ ವಿಮಾನ ನಿಲ್ದಾಣದ ವಿಷಯದ ಕುರಿತು ಪ್ರತಿಭಟನೆಯ ಸಂದರ್ಭದಲ್ಲಿ ಅವರು ಭೇಟಿಯಾಗಿದ್ದು, ನಂತರ ಅವರು ಗುರುಗ್ರಾಮ್‌ನಲ್ಲಿರುವ ವಿಶಾಲ್ ಅವರ ಮನೆಯಲ್ಲಿ ಆಗಾಗ್ಗೆ ಭೇಟಿಯಾಗಲು ಪ್ರಾರಂಭಿಸಿದ್ದಾರೆ. ಬುಧವಾರ ತಡರಾತ್ರಿ ವಿಶಾಲ್ ಮತ್ತು ಅವರ ಪತ್ನಿ ವೃಂದಾ ಶರ್ಮಾ ಅವರನ್ನು ಬಂಧಿಸಲಾಗಿದೆ.

ಆರೋಪಿಗಳು ನಿರುದ್ಯೋಗ ಸಮಸ್ಯೆ, ರೈತರ ಬೇಡಿಕೆಗಳು, ಅಗ್ನಿವೀರ್ ಮತ್ತು ಒನ್ ರ್ಯಾಂಕ್ ಒನ್ ಪಿಂಚಣಿ ಬಗ್ಗೆ ಪ್ರಸ್ತಾಪಿಸುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ.

ದೆಹಲಿ ಪೊಲೀಸರು IPCಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ), 452 (ಅತಿಕ್ರಮಣ), ಸೆಕ್ಷನ್ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು), 186 (ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವಾಗ ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು), 353 ( ಸಾರ್ವಜನಿಕ ಸೇವಕರನ್ನು ಅವರ ಕರ್ತವ್ಯದಿಂದ ತಡೆಯಲು ಆಕ್ರಮಣ ಅಥವಾ ಬಲ ಪ್ರಯೋಗ) ಮತ್ತು UAPA ಯ 16 ಮತ್ತು 18 ಸೆಕ್ಷನ್‌ಗಳನ್ನು ಸಂಸತ್ತಿನ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.