ಉಡುಪಿ: ಜಿಲ್ಲೆಯಲ್ಲಿ ಉಲ್ಬಣಗೊಂಡಿರುವ ಮರಳಿನ ಸಮಸ್ಯೆಗೆ ಪರಿಹಾರ ಕಾಣದೆ ನಿರ್ಮಾಣ ಹಂತದಲ್ಲಿರುವ ಮನೆಗಳು ಅತಂತ್ರ ಸ್ಥಿತಿಯಲ್ಲಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.
ಉಡುಪಿ ಜಿಲ್ಲಾಡಳಿತ ನೇಮಕ ಮಾಡಿರುವ 7 ಸದಸ್ಯರ ಮರಳು ಸಮಿತಿಯ ಸದಸ್ಯ ಗುರುಪ್ರಸಾದ್ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಜಿಲ್ಲೆಯಾದ್ಯಂತ ಕಟ್ಟಡದ ನಿರ್ಮಾಣ ಕ್ಷೇತ್ರದಲ್ಲಿ ವಿಪರೀತ ತೊಂದರೆ ಉಂಟಾಗಿದೆ. ಸಾಮಾನ್ಯ ಜನರ ಅಹವಾಲುಗಳು ಸಂಬಂಧಿಸಿದವರ ಕಿವಿ ತಲುಪುತ್ತಿಲ್ಲ. ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಕಾರ್ಮಿಕರು ಹಲವಾರು ಮನವಿಗಳನ್ನು ನೀಡಿದ್ದರೂ, ಮುಷ್ಕರಗಳನ್ನು ನಡೆಸಿದರೂ ಸರಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿರುವುದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಿಲ್ಲೆಯ ಜನತೆಯ ಮರಳಿನ ಬೇಡಿಕೆಯನ್ನು ಪೂರೈಸುವಲ್ಲಿ ವಿಫಲವಾಗಿರುವ ಕಾರಣ ಉಡುಪಿ ಜಿಲ್ಲೆಯ 7 ಸದಸ್ಯರ ಮರಳು ಸಮಿತಿ (ಸಿ.ಆರ್.ಝಡ್) ಸದಸ್ಯತನಕ್ಕೆ ತಾನು ಈ ಮೂಲಕ ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದು ಗುರುಪ್ರಸಾದ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












