ಹಾಸನ: ಹಾಸನದ ಸಕಲೇಶಪುರದಲ್ಲಿ ಕಾಡಾನೆ ಕಾರ್ಯಾಚರಣೆ ವೇಳೆ ಬಲಿಷ್ಠವಾದ ಒಂಟಿ ಸಲಗದ ದಾಳಿಗೆ ಅರ್ಜುನ ಗಾಯಗೊಂಡು ಸಾವನ್ನಪ್ಪಿದ್ದ. ಮೃತ ಕ್ಯಾಪ್ಟನ್ ಅರ್ಜುನನ್ನು ಹಾಸನದ ಯಸಳೂರಿನ ದಬ್ಬಳ್ಳಿಕಟ್ಟೆಯಲ್ಲಿ ಸಮಾಧಿ ಮಾಡಲಾಗಿತ್ತು. ಇಂದು ಹಾಸನಕ್ಕೆ ಆಗಮಿಸಿ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ 8 ಬಾರಿ ಮೈಸೂರು ಅಂಬಾರಿ ಹೊತ್ತ ಅರ್ಜುನ ಸಮಾಧಿಗೆ ಕೈಮುಗಿದು ನಮಸ್ಕರಿಸಿದರು. ಕಾಡಾನೆ ದಾಳಿಯಲ್ಲಿ ದಸರಾ ಆನೆ ಅರ್ಜುನ ಮೃತಪಟ್ಟ ಹಿನ್ನೆಲೆ ಅರ್ಜುನನ ಸಮಾಧಿಗೆ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಹಾಗೂ ಧರ್ಮಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಆಗಮಿಸಿ ನಮಸ್ಕರಿಸಿದರು.ದಾಳಿಯಿಂದ ಹಾಸನದಲ್ಲಿ ಮೃತಪಟ್ಟಿದ್ದ ಸಾಕಾನೆ ಅರ್ಜುನನ ಸಮಾಧಿಗೆ ಇಂದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಭೇಟಿ ಕೊಟ್ಟು ನಮಸ್ಕರಿಸಿದರು.
ಮೈಸೂರು, ಹಾಸನದಲ್ಲಿ ಅರ್ಜುನನ ಸ್ಮಾರಕ: ಮೈಸೂರು ದಸರಾದ ಕೇಂದ್ರ ಬಿಂದುವಾಗಿದ್ದ ಅರ್ಜುನ ಆನೆಯ ಸ್ಮಾರಕವನ್ನು ಮೈಸೂರು ಮತ್ತು ಹಾಸನ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಈಗಾಗಲೇ ಘೋಷಿಸಿದ್ದಾರೆ.ಫೇಸ್ಬುಕ್ ಮೂಲಕ ಬೇಸರ ವ್ಯಕ್ತಪಡಿಸಿರುವ ಒಡೆಯರ್: ಅರ್ಜುನನ ಸಾವಿನ ಕುರಿತು ಮಹಾರಾಜ ಯದುವೀರ್ ಒಡೆಯರ್ ‘ಮೈಸೂರು ದಸರಾ ಮಹೋತ್ಸವದಲ್ಲಿ 8 ಭಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಸಾವು ಅತೀವ ದುಃಖವನ್ನುಂಟು ಮಾಡಿದೆ. ಪೂರ್ವನಿಯೋಜಿತ ಕಾರ್ಯಕ್ರಮಗಳಿಂದ ಅರ್ಜುನನ ಅಂತ್ಯ ಸಂಸ್ಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಇಂದು ಅರ್ಜುನನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅವನ ಸದ್ಗತಿಗಾಗಿ ಪ್ರಾರ್ಥಿಸಲಾಯಿತು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಅರ್ಜುನನ ಸಾವಿನ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಯೆ: ಆನೆ ಅರ್ಜುನ ಸಾವಿನ ಬಗ್ಗೆ ಸರ್ಕಾರ ಸತ್ಯ ಮುಚ್ಚಿಡುವ ಕೆಲಸ ಮಾಡುತ್ತಿದೆ. ಅದೇ ಕಾರಣಕ್ಕೆ ತರಾತುರಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆನೆ ಅರ್ಜುನ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಆರ್ಟಿ ನಗರ ನಿವಾಸದಲ್ಲಿ ನಡೆದ ಮಾಧ್ಯಮಗೋಷ್ಠಿ ವೇಳೆ ಹೇಳಿದ್ದರು.ಅರ್ಜುನನ ಪ್ರಾಣ ಹೋದಲ್ಲೇ ಸ್ಮಾರಕ – ಸಿಎಂ ಸಿದ್ದರಾಮಯ್ಯ: ಅರ್ಜುನನ ಸಾವಿನಘಟನೆ ಬಗ್ಗೆ ಸಂಪೂರ್ಣ ತನಿಖೆ ಮಾಡುವಂತೆ ಸೂಚಿಸಲಾಗಿದೆ. ಅರ್ಜುನ ಆನೆ ಪ್ರಾಣ ಕಳೆದುಕೊಂಡ ಸ್ಥಳದಲ್ಲಿಯೇ ಸ್ಮಾರಕ ನಿರ್ಮಾಣ ಮಾಡಲಾಗುವುದು ಹಾಗೂ ಹೆಗ್ಗಡದೇವನಕೋಟೆಯಲ್ಲಿಯೂ ಸ್ಮಾರಕವಾಗಬೇಕು ಎಂದು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ 6ರಂದು ಹೇಳಿದ್ದರು.