ಹೈದರಾಬಾದ್: ಬಿಆರ್ಎಸ್ ನಾಯಕ ಹಾಗೂ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಕಲ್ವಕುಂಟ್ಲ ಚಂದ್ರಶೇಖರ್ ರಾವ್ ಅವರನ್ನು ಗುರುವಾರ ತಡರಾತ್ರಿ ಸೋಮಾಜಿಗುಡದಲ್ಲಿರುವ ಯಶೋದಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಿದ್ದಿದ್ದರಿಂದ ಅವರ ಸೊಂಟದ ಮೂಳೆ ಮುರಿತವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆಗಳಿವೆ. ವೈದ್ಯಕೀಯ ಪರೀಕ್ಷೆಗಳ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕಾ ಬೇಡವೇ ಎಂಬ ಬಗ್ಗೆ ಡಾಕ್ಟರ್ಗಳು ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ಎರ್ರವೆಲ್ಲಿಯ ತಮ್ಮ ನಿವಾಸದಲ್ಲಿ ಬಿದ್ದು ಗಾಯಗೊಂಡಿದ್ದರು.ಮನೆಯಲ್ಲಿ ಬಿದ್ದು ಗಾಯಗೊಂಡಿರುವ ಮಾಜಿ ಸಿಎಂ ಚಂದ್ರಶೇಖರ್ ರಾವ್ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಯತ್ತ ಪಕ್ಷದ ಮುಖಂಡರು: ಇದೇ ವೇಳೆ ಯಶೋದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಚಂದ್ರಶೇಖರ್ ರಾವ್ ಜತೆ ಅವರ ಜತೆ ಪತ್ನಿ ಶೋಭಾ, ಪುತ್ರಿ ಕಲ್ವಕುಂಟ್ಲ ಕವಿತಾ, ಸಂಸದ ಜೋಗಿನಪಲ್ಲಿ ಸಂತೋಷಕುಮಾರ್ ಇದ್ದಾರೆ. ನಾಯಕನನ್ನು ನೋಡಲು ಪಕ್ಷದ ಮುಖಂಡರು ಒಬ್ಬೊಬ್ಬರಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಜಗದೀಶ್ ರೆಡ್ಡಿ ಮತ್ತು ಪಲ್ಲಾ ರಾಜೇಶ್ವರ್ ರೆಡ್ಡಿ ಮಾಜಿ ಸಿಎಂ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ವೈದ್ಯರೊಂದಿಗೆ ಮಾತನಾಡಿ ಕೆ ಸಿ ಆರ್ ಆರೋಗ್ಯ ಹೇಗಿದೆ ಎಂಬುದರ ಬಗ್ಗೆ ತಿಳಿದುಕೊಂಡರು.
ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಬಿಎಆರ್ಎಸ್: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಆರ್ಎಸ್ ಪಕ್ಷ ಸೋಲನುಭವಿಸಿತ್ತು. ಕಳೆದ ಬಾರಿ 88 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಮರಳಿದ್ದ ಕೆಸಿಆರ್ ಈ ಬಾರಿ 39 ಸ್ಥಾನಗಳಿಗೆ ಕುಸಿತ ಕಂಡು, ಸಿಎಂ ಪಟ್ಟ ಕಳೆದುಕೊಂಡಿದ್ದರು. ಕಾಮಾರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದ ಅವರು, ಇನ್ನೊಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.ಮಾಜಿ ಸಿಎಂ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿದು ಅವರ ಅಭಿಮಾನಿಗಳು ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಅವರ ಆರೋಗ್ಯ ವಿಚಾರಿಸುವ ಕಾತರದಲ್ಲಿದ್ದಾರೆ. ಟ್ವೀಟ್ ಮಾಡಿ ಮಾಹಿತಿ ನೀಡಿದ ಕೆ ಕವಿತಾ: ತೆಲಂಗಾಣ ಬಿಆರ್ಎಸ್ ಎಂಎಲ್ಸಿ ಹಾಗೂ ಅವರ ಪುತ್ರಿ ಕೆ.ಕವಿತಾ ಟ್ವೀಟ್ ಮಾಡಿದ್ದಾರೆ “ಬಿಆರ್ಎಸ್ ಮುಖ್ಯಸ್ಥ ಕೆಸಿಆರ್ ಅವರಿಗೆ ಸಣ್ಣ ಗಾಯವಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಜ್ಞರ ಆರೈಕೆಯಲ್ಲಿದ್ದಾರೆ. ಜನರ ಬೆಂಬಲ ಮತ್ತು ಶುಭಾಶಯಗಳ ಮಹಾಪೂರದಿಂದ, ನಮ್ಮ ತಂದೆ ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ” ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.