ಉತ್ತರ ಕನ್ನಡದಲ್ಲಿ ವಿನೂತನ ಕ್ರಮ ಜಾರಿ : ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಕ್ಯೂಆರ್ ಕೋಡ್

ಕಾರವಾರ(ಉತ್ತರ ಕನ್ನಡ): ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಲೋಕಸ್ಪಂದನ ಕ್ಯೂಆರ್ ಕೋಡ್ ಆಧಾರಿತ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಾರ್ವಜನಿಕರು ತಮ್ಮ ಪ್ರತಿಕ್ರಿಯೆ, ಸಲಹೆಗಳನ್ನು ಮುಕ್ತವಾಗಿ ನೀಡಬಹುದು. ಎಲ್ಲಾ ಪೊಲೀಸ್ ಠಾಣೆಗಳ ಪ್ರವೇಶ ದ್ವಾರದಲ್ಲಿ ಕ್ಯೂಆರ್ ಕೋಡ್ ಪ್ರದರ್ಶಿಸಲಾಗಿದ್ದು, ಠಾಣೆಗೆ ಭೇಟಿ ನೀಡುವವರು ಪೊಲೀಸರ ಸೇವೆಯ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಬಹುದು. ಈ ಕ್ರಮವು ಪೊಲೀಸರಿಗೆ ಉತ್ತಮ ಸೇವೆ ನೀಡಲು ಮತ್ತು ಸಿಬ್ಬಂದಿಯ ದಕ್ಷತೆ ಸುಧಾರಿಸುವುದರೊಂದಿಗೆ ಪಾರದರ್ಶಕತೆಯನ್ನು ತರಲು ಸಹಾಯಕವಾಗಲಿದೆ.

ಸಾಮಾನ್ಯವಾಗಿ ಡೆಲಿವರಿ ಆಯಪ್​ಗಳಲ್ಲಿ, ಬ್ರಾಂಡೆಡ್ ಕಂಪನಿಗಳ ಶೋರೂಮ್​ಗಳಲ್ಲಿ, ಗೂಗಲ್ ರಿವ್ಯೂವ್​ಗಳಲ್ಲಿ ಫೀಡ್ ಬ್ಯಾಕ್ ಕೊಡುವುದನ್ನು ನೋಡಿರುತ್ತೇವೆ, ಇಲ್ಲವೇ ಕೇಳಿರುತ್ತೇವೆ. ಆದರೆ ಸರ್ಕಾರಿ ಸೇವೆ ನೀಡುವವರಿಗೂ ಸ್ಟಾರ್ ರೇಟಿಂಗ್, ಅವರ ಸೇವೆಗೆ ಸಂಬಂಧಿಸಿದಂತೆ ಫೀಡ್ ಬ್ಯಾಕ್ ಕೊಡುವುದನ್ನು ಕೇಳಿದ್ದೀರಾ? ಇಂಥದ್ದೊಂದು ವಿನೂತನ ವ್ಯವಸ್ಥೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿದೆ.ಖಾಸಗಿ ಸಂಸ್ಥೆಗಳ ಸೇವೆಗಳಿಗೆ ಸೀಮಿತವಾಗಿದ್ದ ಫೀಡ್ ಬ್ಯಾಕ್ ವ್ಯವಸ್ಥೆ ಇದೀಗ ಪೊಲೀಸ್ ಇಲಾಖೆಯಲ್ಲೂ ಅನುಷ್ಠಾನಗೊಳ್ಳುತ್ತಿದೆ.

“ಉತ್ತರ ಕನ್ನಡ ಜಿಲ್ಲೆಯಲ್ಲಿ 29 ಪೊಲೀಸ್​ ಠಾಣೆಗಳಿದ್ದು, ರಾಜ್ಯದೆಲ್ಲೆಡೆ ಈ ರೀತಿಯ ವ್ಯವಸ್ಥೆ ಮಾಡಿರುವುದು ಉತ್ತಮವಾಗಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆವಾಗಬೇಕು ಎಂದು ಸರ್ಕಾರ ಹಲವು ವರ್ಷಗಳಿಂದ ಪ್ರಯತ್ನ ಮಾಡುತ್ತಿದೆ” ಎಂದು ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ತಿಳಿಸಿದರು.

“ಪೊಲೀಸ್​ ಠಾಣೆಗೆ ಸಾರ್ವಜನಿಕರು ಬರುವ ಸಂದರ್ಭದಲ್ಲಿ ಅವರೊಂದಿಗೆ ಸಿಬ್ಬಂದಿ ಒಳ್ಳೆಯ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದಾರೋ ಇಲ್ಲವೋ? ಎಂಬುದು ಮೇಲಾಧಿಕಾರಿಗಳಿಗೆ ಗೊತ್ತಾಗುವುದಕ್ಕೆ ಲೋಕಸ್ಪಂದನ ಕಾರ್ಯಕ್ರಮದಡಿ ಠಾಣೆಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿತ್ತು. ಕಳೆದ ಒಂದು ವರ್ಷದಿಂದ 2982 ಜನರು ಬಂದು ತಮ್ಮ ದೂರುಗಳನ್ನು ನೀಡಿದ್ದಾರೆ. ಅದರಲ್ಲಿ 623 ಜನ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಬಹಳಷ್ಟು ಜನರು 4 ರಿಂದ 5 ಸ್ಟಾರ್​ಗಳನ್ನು ಕೊಟ್ಟು ತೃಪ್ತಿಕರವಾಗಿದೆ ಎಂದಿದ್ದಾರೆ. ಮೂವರು ಮಾತ್ರ ನಮಗೆ ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್ ಹೇಳಿದರು.

ಪೊಲೀಸ್‌ ಠಾಣೆಗೆ ಬರುವ ಜನರು ಅಥವಾ ದೂರುದಾರರು ತಮ್ಮ ಸೆಲ್‌ಫೋನ್‌ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸಿಬ್ಬಂದಿಯ ವರ್ತನೆ, ದೂರುಗಳನ್ನು ಸ್ವೀಕರಿಸುವುದು, ಪ್ರತಿಕ್ರಿಯೆ ಮತ್ತು ಇತರ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ನೀಡಬಹುದು. ಈ ದೂರು, ವಿಮರ್ಶೆ ಅಥವಾ ಕಾಮೆಂಟ್‌ಗಳನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಠಾಣೆಗಳಲ್ಲಿ ಕೋಡ್‌ನೊಂದಿಗೆ ‘ನಿಮ್ಮ ನುಡಿ, ನಿಮ್ಮ ನಡೆ’ ಮತ್ತು ‘ನಾವು ಕಾನೂನನ್ನು ಗೌರವಿಸುವವರನ್ನು ಗೌರವಿಸುತ್ತೇವೆ’ ಎಂಬ ಅಡಿಬರಹ ಪ್ರದರ್ಶಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಇದಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.