ಬೆಂಗಳೂರು: ಉದ್ಯಮಿ ಒಬ್ಬರಿಗೆ ಬೈಂದೂರು ವಿಧಾನಸಭೆಯ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಚೈತ್ರಾ ಕುಂದಾಪುರ ಜಾಮೀನಿನ ಮೇಲೆ ಪರಪ್ಪನ ಅಗ್ರಹಾರದಿಂದ ಬುಧವಾರ ರಾತ್ರಿ ಬಿಡುಗಡೆಯಾಗಿದ್ದಾರೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಹಾಗೂ ಆರೋಪಿ ಶ್ರೀಕಾಂತ್ಗೆ ಎರಡು ದಿನಗಳ ಹಿಂದೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಚೈತ್ರಾ ಪರ ವಕೀಲರು ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯದ ಆದೇಶ ನೀಡಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಅಧಿಕಾರಿಗಳು ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಚೈತ್ರಾ ಹಾಗೂ ತಂಡದವರ ಮೇಲೆ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಪೊಲೀಸ್ ಆಯಕ್ತ ಸೂಚನೆಯ ಮೇರೆಗೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಚೈತ್ರಾ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದರು.












