ನವದೆಹಲಿ: ಬಿಟ್ ಕಾಯಿನ್ ಭವಿಷ್ಯದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಬಹುದಾದರೂ ಅಲ್ಪಾವಧಿಯಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು ಎಂಬುದು ಕೆಲ ವಿಶ್ಲೇಷಕರ ಅಭಿಪ್ರಾಯವಾಗಿದೆ.ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೌಲ್ಯ 42,000 ಡಾಲರ್ಗೆ ತಲುಪಿದೆ ಎಂದು ವರದಿಗಳು ಮಂಗಳವಾರ ತಿಳಿಸಿವೆ.ಬಿಟ್ ಕಾಯಿನ್ ಮೌಲ್ಯ 19 ತಿಂಗಳ ಗರಿಷ್ಠ ಮಟ್ಟಕ್ಕೇರಿದ್ದು, ಕ್ರಿಪ್ಟೊ ಕರೆನ್ಸಿ ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳುತ್ತಿದೆ.ಇದು ಬಿಟ್ ಕಾಯಿನ್ ಮೌಲ್ಯದ 19 ತಿಂಗಳ ಗರಿಷ್ಠ ಮಟ್ಟವಾಗಿದೆ. ಬಿಟ್ ಕಾಯಿನ್ ಮೌಲ್ಯದಲ್ಲಿ ಗರಿಷ್ಠ ಏರಿಕೆಯ ಕಾರಣದಿಂದ ಮೇ 2022ರ ನಂತರ ಇದೇ ಮೊದಲ ಬಾರಿಗೆ ಕ್ರಿಪ್ಟೊ ಮಾರುಕಟ್ಟೆ ಬಂಡವಾಳ 1.5 ಟ್ರಿಲಿಯನ್ ಡಾಲರ್ಗೆ ತಲುಪಿದೆ. ಮಂಗಳವಾರ ಬಿಟ್ ಕಾಯಿನ್ ಬೆಲೆ ಪ್ರತಿ ಟೋಕನ್ಗೆ 41,700 ಡಾಲರ್ನಷ್ಟಿತ್ತು.
ಬಿಟ್ ಕಾಯಿನ್ ಇಂದಿನಿಂದ ಒಂದು ವರ್ಷದ ನಂತರ ತನ್ನ ಹಿಂದಿನ ಉತ್ತುಂಗವನ್ನು ತಲುಪಬಹುದು ಎಂದು ಗ್ಯಾಲಕ್ಸಿ ಡಿಜಿಟಲ್ ಹೋಲ್ಡಿಂಗ್ಸ್ ಲಿಮಿಟೆಡ್ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕೆಲ್ ನೊವೊಗ್ರಾಟ್ಜ್ ಭವಿಷ್ಯ ನುಡಿದಿದ್ದಾರೆ. ಬಿಟ್ ಕಾಯಿನ್ 2021 ರ ನವೆಂಬರ್ನಲ್ಲಿ ಸುಮಾರು 69,000 ಡಾಲರ್ನ ಗರಿಷ್ಠ ಮಟ್ಟ ತಲುಪಿತ್ತು. ಆದರೆ, ಕಳೆದ ವರ್ಷ ಶೇ 64 ರಷ್ಟು ಮೌಲ್ಯ ಕಳೆದುಕೊಂಡಿತ್ತು. ಬಿಟ್ ಕಾಯಿನ್ ಇಟಿಎಫ್ ವಹಿವಾಟು ಪ್ರಾರಂಭವಾದಲ್ಲಿ ಒಂದು ವರ್ಷದೊಳಗೆ ಶತಕೋಟಿ ಡಾಲರ್ನಷ್ಟು ಹೂಡಿಕೆ ಇಟಿಎಫ್ಗೆ ಹರಿಯಲಿದೆ ಎಂದು ನೊವೊಗ್ರಾಟ್ಜ್ ಹೇಳಿದ್ದಾರೆ.
ಬಡ್ಡಿದರ ಕಡಿಮೆಯಾಗಿರುವುದು, ಸ್ಪಾಟ್ ಬಿಟ್ ಕಾಯಿನ್ ಇಟಿಎಫ್ ಜಾರಿಯಾಗುವ ನಿರೀಕ್ಷೆ ಮತ್ತು “ಪ್ಯಾನಿಕ್ ಖರೀದಿ”ಗಳ ಕಾರಣದಿಂದ ಬಿಟ್ ಕಾಯಿನ್ ಮಾರುಕಟ್ಟೆ ಮತ್ತೆ ಚೇತರಿಸಿಕೊಂಡಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದಾಗ್ಯೂ, ಸಣ್ಣ ಕ್ರಿಪ್ಟೋ ಟೋಕನ್ಗಳ ಬೆಲೆಗಳು ಹೆಚ್ಚಾಗಿಲ್ಲ. ಈಥರ್ (ಇಟಿಎಚ್), ಬಿಎನ್ಬಿ ಮತ್ತು ಎಡಿಎ ದಿನದಲ್ಲಿ ಶೇಕಡಾ 2 ರಿಂದ 3 ರಷ್ಟು ಏರಿಕೆ ಕಂಡರೆ, ಎಕ್ಸ್ಆರ್ಪಿ ಸಮತಟ್ಟಾಗಿ ವಹಿವಾಟು ನಡೆಸಿತು.
ಫೆಬ್ರವರಿಯಲ್ಲಿ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬೆಲೆಗಳು ಬ್ಯಾರೆಲ್ಗೆ ಶೇಕಡಾ 0.63 ರಷ್ಟು ಕುಸಿದು 78.38 ಡಾಲರ್ಗೆ ತಲುಪಿವೆ. ಹಾಗೆಯೇ ಜನವರಿಗಾಗಿ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್ (ಡಬ್ಲ್ಯುಟಿಐ) ಕ್ರೂಡ್ ಫ್ಯೂಚರ್ ಶೇಕಡಾ 0.55 ರಷ್ಟು ಕುಸಿದು 73.66 ಡಾಲರ್ಗೆ ತಲುಪಿದೆ.ರೂಪಾಯಿ ಮೌಲ್ಯ ಕುಸಿತ: ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್ನ ಚೇತರಿಕೆಯ ಮಧ್ಯೆ ಭಾರತೀಯ ರೂಪಾಯಿ ಸೋಮವಾರ ಅಮೆರಿಕ ಡಾಲರ್ ವಿರುದ್ಧ 8 ಪೈಸೆ ಕುಸಿದಿದೆ. ರೂಪಾಯಿ ಶುಕ್ರವಾರ ಇದ್ದ 83.29 ಕ್ಕೆ ಹೋಲಿಸಿದರೆ ಡಾಲರ್ಗೆ 83.37 ರಲ್ಲಿ ಕೊನೆಗೊಂಡಿತು. ಆರು ಕರೆನ್ಸಿಗಳ ವಿರುದ್ಧ ಡಾಲರ್ನ ಮೌಲ್ಯ ಅಳೆಯುವ ಡಾಲರ್ ಸೂಚ್ಯಂಕ ಶೇಕಡಾ 0.06 ರಷ್ಟು ಏರಿಕೆಯಾಗಿ 103.32 ಕ್ಕೆ ತಲುಪಿದೆ.