ಚೆನ್ನೈ (ತಮಿಳುನಾಡು): ಕೆಲ ನದಿಗಳು ಉಕ್ಕಿ ಹರಿಯುತ್ತಿದ್ದು, ವಿಮಾನ ಸಂಚಾರ ಪುನಾರಂಭವಾಗಿದೆ. 2015 ರ ಬಳಿಕ ದೊಡ್ಡ ಮಳೆಯನ್ನು ರಾಜ್ಯ ಕಂಡಿದೆ ಎಂದು ಸರ್ಕಾರ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿದ್ದ ಮಿಚೌಂಗ್ ಚಂಡಮಾರುತ ಅಬ್ಬರಿಸಿ ಚೆನ್ನೈನ ವಿವಿಧ ಭಾಗಗಳಲ್ಲಿ ಭಾರಿ ಮಳೆ ಸುರಿಸಿ ಇದೀಗ ಶಾಂತವಾಗಿದೆ. ತಮಿಳುನಾಡಿನಲ್ಲಿ ಅಬ್ಬರಿಸಿದ ಮಿಚೌಂಗ್ ಚಂಡಮಾರುತದ ಅಬ್ಬರ ಇಳಿದಿದೆ. ಸ್ಥಗಿತಗೊಂಡಿದ್ದ ವಿಮಾನ ಸೇವೆ ಪುನಾರಂಭಿಸಲಾಗಿದೆ.
2015 ರ ಬಳಿಕ ದೊಡ್ಡ ಮಳೆ: ರಾಜ್ಯದಲ್ಲಿ ಈಗ ಬಿದ್ದಿರುವ ಮಳೆ 2015 ರ ನಂತರದ ದೊಡ್ಡ ವರ್ಷಧಾರೆಯಾಗಿದೆ. ಹಿಂದಿನ ಹಾನಿಗೆ ಹೋಲಿಸಿದರೆ ಇದು ಕಡಿಮೆ. 2015 ರಲ್ಲಿ ತೀವ್ರ ಮಳೆಯಾಗಿ ಸೆಂಬರಂಬಾಕ್ಕಂ ಡ್ಯಾಂನಿಂದ ನೀರು ಬಿಡುಗಡೆಯಾಗಿ ಪ್ರವಾಹ ಉಂಟಾಗಿತ್ತು. ಇದರಿಂದ ವಿವಿಧೆಡೆ 199 ಮಂದಿ ಸಾವಿಗೀಡಾಗಿದ್ದು. ಈಗ ಸುರಿದ ಮಳೆ ನೈಸರ್ಗಿಕವಾಗಿದ್ದು, ಪ್ರವಾಹ ಉಂಟಾದರೂ ಹಾನಿ ಕಡಿಮೆಯಾಗಿದೆ ಎಂದು ಸಿಎಂ ಎಂ.ಕೆ. ಸ್ಟಾಲಿನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಮಾನಗಳ ಸಂಚಾರ ಪುನಾರಂಭ: ಭೀಕರ ಮಳೆ, ಪ್ರವಾಹದಿಂದ ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜಲಾವೃತವಾಗಿತ್ತು. ಇದರಿಂದ 60 ಕ್ಕೂ ಅಧಿಕ ವಿಮಾನಗಳ ಸಂಚಾರವನ್ನು ಒಂದು ದಿನ ತಾತ್ಕಾಲಿಕವಾಗಿ ನಿಲುಗಡೆ ಮಾಡಲಾಗಿತ್ತು. ಇದೀಗ ವಾತಾವರಣ ತಿಳಿಗೊಂಡಿದ್ದು, ಸಂಚಾರ ಪುನಾರಂಭಿಸಲಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದರು.
ಮಳೆ ನಿಂತ ಕಾರಣ ನೀರು ಕಡಿಮೆಯಾಗಿದೆ. ರನ್‌ವೇಗಳು ಮತ್ತು ಟ್ಯಾಕ್ಸಿವೇಗಳಲ್ಲಿ ಸಾಕಷ್ಟು ಕೆಸರು ತುಂಬಿದೆ. ತಂಡಗಳು ತೆರವು ಮಾಡುತ್ತಿವೆ. ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಜನರ ಪ್ರಯಾಣಕ್ಕೆ ಏರ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ (ಎಟಿಎಂ) ವ್ಯವಸ್ಥೆ ಮಾಡಿದೆ. ಸದ್ಯ 21 ವಿಮಾನಗಳು ಸಂಚಾರಕ್ಕೆ ಸಿದ್ಧವಾಗಿವೆ. ಟರ್ಮಿನಲ್‌ಗಳಲ್ಲಿ ಸುಮಾರು 1500 ಪ್ರಯಾಣಿಕರು ಇದ್ದಾರೆ ಎಂದು ತಿಳಿಸಿದರು.ಸಂಕಷ್ಟಕ್ಕೀಡಾದ ಜನರು ನೆರವು ನೀಡಲು ಸರ್ಕಾರದೊಂದಿಗೆ ಕೈಜೋಡಿಸುವಂತೆ ವಿವಿಧ ಸಂಘ ಸಂಸ್ಥೆಗಳಿಗೆ ಮುಖ್ಯಮಂತ್ರಿ ಕರೆ ನೀಡಿದರು.
ಚಂಡಮಾರುತ ಮತ್ತು ಮಳೆ ಹಾನಿಗೆ ಕೇಂದ್ರ ಸರ್ಕಾರದಿಂದ 5 ಸಾವಿರ ಕೋಟಿ ರೂ.ಗಳ ಪರಿಹಾರ ನೆರವು ಕೋರಲಾಗುವುದು. ನಷ್ಟಕ್ಕೊಳಗಾದ ಜನರಿಗೆ ಸಹ ಪರಿಹಾರ ನೆರವು ನೀಡಲಾಗುವುದು ಎಂದು ಸ್ಟಾಲಿನ್ ಭರವಸೆ ನೀಡಿದರು.ರಾಜಧಾನಿ ಚೆನ್ನೈ ಸೇರಿದಂತೆ ವಿವಿಧ ನಗರಗಳಲ್ಲಿ ಮಿಚೌಂಗ್ ಅಬ್ಬರಿಸಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಪ್ರತ್ಯೇಕ ಘಟನೆಗಳಲ್ಲಿ 8 ಮಂದಿ ಸಾವಿಗೀಡಾಗಿದ್ದಾರೆ. ರೈಲು, ವಿಮಾನ ಸಂಚಾರವನ್ನು ಒಂದು ದಿನ ಸ್ಥಗಿತಗೊಳಿಸಲಾಗಿತ್ತು. ಕಾರುಗಳು ನೀರಿನಲ್ಲಿ ಕೊಚ್ಚಿ ಹೋದ ದೃಶ್ಯಗಳು ಕಂಡುಬಂದಿದ್ದವು. ಮೊಸಳೆಗಳು ರಸ್ತೆಯಲ್ಲಿ ಕಾಣಿಸಿಕೊಂಡು ಆತಂಕ ಉಂಟು ಮಾಡಿದ್ದವು. ಇದೀಗ ಅಬ್ಬದ ಇಳಿದಿದ್ದು, ಸೈಕ್ಲೋನ್ ಆಂಧ್ರಪ್ರದೇಶದಲ್ಲಿ ತನ್ನ ರೌದ್ರಾವತಾರ ತೋರುತ್ತಿದೆ.