ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸ ಪ್ರಯುಕ್ತ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಡಿ. 8 ರಿಂದ 12 ರವರೆಗೆ ನಡೆಯಲಿವೆ.
ಡಿ.8ರಂದು ಬೆಳಗ್ಗೆ 10.30ಕ್ಕೆ ಹೈಸ್ಕೂಲ್ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಡಿ.10 ರಂದು ರಾತ್ರಿ 7 ರಿಂದ 10ರವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಗಾನ, ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.
ಡಿ.11 ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನವನ್ನು ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ.ಗುರುರಾಜ ಕರ್ಜಗಿ ಉದ್ಘಾಟಿಸಲಿದ್ದಾರೆ. ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯವಾದಿ ಡಾ. ಎಂ.ಆರ್. ವೆಂಕಟೇಶ್, ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥ ವಿಜಯಪುರದ ಮಹಮ್ಮದ್ ಗೌಸ್ ಹವಾಲ್ದಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 8.30 ರಿಂದ ಬೆಂಗಳೂರಿನ ಅನುರಾಧಾ ವಿಕ್ರಾಂತ್ ಮತ್ತು ಬಳಗದವರಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ಡಿ.12 ರಂದು ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನವನ್ನು ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ ಉದ್ಘಾಟಿಸಲಿದ್ದು, ಬೆಂಗಳೂರಿನ ಖ್ಯಾತ ಗಮಕಿ ಡಾ. ಎ.ವಿ. ಪ್ರಸನ್ನ ಅಧ್ಯಕ್ಷತೆ ವಹಿಸಲಿದ್ದಾರೆ. ಹೊನ್ನಾವರದ ನಿವೃತ್ತ ಉಪನ್ಯಾಸಕ ಡಾ. ಶ್ರೀಪಾದ ಶೆಟ್ಟಿ, ಬೆಂಗಳೂರಿನ ರಂಗಕರ್ಮಿ ಪ್ರಕಾಶ್ ಬೆಳವಡಿ ಮತ್ತು ಬಂಟ್ವಾಳದ ಡಾ. ಅಜಕ್ಕಳ ಗಿರೀಶ್ ಭಟ್ ಉಪನ್ಯಾಸ ನೀಡುವರು. ರಾತ್ರಿ 8.30ರಿಂದ ಬೆಂಗಳೂರಿನ ಜತಿನ್ ನೃತ್ಯ ಅಕಾಡೆಮಿಯ ವಿದುಷಿ ಅರ್ಚನಾ ಪುಣ್ಯೇಶ್ ಮತ್ತು ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಡಿ.12ರಂದು ರಾತ್ರಿ 12 ಗಂಟೆ ಬಳಿಕ ಲಕ್ಷದೀಪೋತ್ಸವ ನಡೆಯಲಿದ್ದು ರಾಜ್ಯದ ಹಲವೆಡೆಗಳಿಂದ ಕ್ಷೇತ್ರಕ್ಕಾಗಮಿಸುವ ಭಕ್ತರಿಗಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ.