ಪೂರ್ವ ಕರಾವಳಿಯತ್ತ ಮುನ್ನುಗ್ಗುತ್ತಿರುವ ‘ಮೈಚಾಂಗ್’ ಚಂಡಮಾರುತ; ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಸಾಧ್ಯತೆ

ಚೆನ್ನೈ: ‘ಮೈಚಾಂಗ್’ ಚಂಡಮಾರುತದ ಪರಿಣಾಮ ತಮಿಳುನಾಡು ಮತ್ತು ಪುದುಚೇರಿಯ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪುದುಚೇರಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಡಿ.4 ರಂದು ಕರೈಕಾಲ್ ಮತ್ತು ಯಾಣಂ ಪ್ರದೇಶಗಳಲ್ಲಿ ಶಾಲಿಗಳಿಗೆ ರಜೆ ಘೋಷಿಸಲಾಗಿದೆ.

ತಮಿಳುನಾಡಿನ ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು, ಚೆನ್ನೈ, ತೆಂಕಶಿ, ತೂತುಕುಡಿ, ತಿರುನಲ್ವೇಲಿ, ಕನ್ನಿಯಕುಮಾರಿ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ, ವಿಲ್ಲುಪುರಂ, ರಾಣಿಪೇಟ್, ಕಡಲೂರು, ತಂಜಾವೂರು, ನಾಗಪಟ್ಟಣಂ, ಮೈಲಾಡುತುರೈ, ತಿರುವರೂರ್, ರಾಮನಾಥಪುರಂ, ತಿರುಪುರ್, ದಿಂಡಿಗಲ್, ಪುದುಕೊಟ್ಟೈ, ವಿರುದುನಗರ, ನೀಲಗಿರಿ, ಪುದುಚೇರಿ ಹಾಗೂ ಥೇಣಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಹವಾಮಾನ ಇಲಾಖೆ ಪ್ರಕಾರ, ಆಗ್ನೇಯ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುತ್ತಿದ್ದು, ಈ ಕಾರಣದಿಂದಾಗಿ ‘ಮೈಚಾಂಗ್’ ಚಂಡಮಾರುತ ಅತಿ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯಿದೆ. ನೈಋತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಕಳೆದ ಕೆಲವು ದಿನಗಳಿಂದ ಗಂಟೆಗೆ 9 ಕಿಲೋಮೀಟರ್ ವೇಗದಲ್ಲಿ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುತ್ತಿದೆ.

ಮುಂದಿನ ಒಂದೆರಡು ದಿನಗಳಲ್ಲಿ ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ಒಡಿಶಾದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಸೂಚಿಸಿದೆ.