ಕುಂದಾಪುರ: ದಾಖಲೆಗಳೆಲ್ಲಾ ಸರಿಯಿದ್ದರೂ ದಂಡ ವಿಧಿಸಲು ಮುಂದಾದ ಟ್ರಾಫಿಕ್ ಪೊಲೀಸರ ನಡೆಗೆ ಬೈಕ್ ಸವಾರ ಯುವಕನೋರ್ವ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹೆಮ್ಮಾಡಿ ಸರ್ಕಲ್ ಬಳಿ ಬುಧವಾರ ಸಂಜೆ ನಡೆದಿದೆ.
ಹೆಮ್ಮಾಡಿ ಸರ್ಕಲ್ ಬಳಿಯಲ್ಲಿ ಕುಂದಾಪುರ ಸಂಚಾರಿ ಠಾಣೆಯ ಪಿಎಸ್ಐ ಪುಷ್ಪಾ ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆಯಲ್ಲಿ ಹೆಮ್ಮಾಡಿ ಮೀನು ಮಾರುಕಟ್ಟೆ ರಸ್ತೆಯಿಂದ ಬೈಕ್ನಲ್ಲಿ ಸಾಗಿ ಬಂದ ಯುವಕನೋರ್ವನ ಬೈಕ್ ಅನ್ನು ಟ್ರಾಫಿಕ್ ಕಾನ್ಸ್ಟೇಬಲ್ ಅಡ್ಡಗಟ್ಟಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಎಲ್ಲಾ ದಾಖಲೆಗಳು ಸರಿಯಿದ್ದು, ಹೆಲ್ಮೆಟ್ ಧರಿಸಿದ್ದರೂ ಹೆಲ್ಮೆಟ್ ಧರಿಸಿಲ್ಲ ಎಂದು ಪೊಲೀಸ್ ಸಿಬ್ಬಂದಿ ಯುವಕನೊಂದಿಗೆ ವಾಗ್ವಾದಕ್ಕಿಳಿದ್ದಾರೆ. ದಾಖಲೆಗಳೆಲ್ಲಾ ಸರಿಯಿದ್ದು ಹೆಲ್ಮೆಟ್ ಧರಿಸಿದ್ದರೂ ದಂಡ ಯಾಕೆ ಕಟ್ಟಬೇಕು ಎಂದು ಪೊಲೀಸ್ ಸಿಬ್ಬಂದಿಯ ವರ್ತನೆಗೆ ಯುವಕ ರೊಚ್ಚಿಗೆದ್ದಿದಾನೆ.
ತಕ್ಷಣವೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು ಪೊಲೀಸ್ ಜೀಪ್ ಸುತ್ತುವರಿದು ಯುವಕ ಹೆಲ್ಮೆಟ್ ಧರಿಸಿದ್ದಾಗಿ ಪಿಎಸ್ಐ ಪುಷ್ಪಾ ಅವರಿಗೆ ಮನವರಿಕೆ ಮಾಡಿದರು. ಬಳಿಕ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ಯುವಕನಿಗೆ ನೂರು ರೂಪಾಯಿ ದಂಡ ವಿಧಿಸಿ ಕಳುಹಿಸಿದ್ದಾರೆ. ಪೊಲೀಸರ ಹಾಗೂ ಬೈಕ್ ಸವಾರ ಯುವಕನ ನಡುವೆ ನಡೆಯುತ್ತಿದ್ದ ವಾಗ್ವಾದವನ್ನು ಹಲವರು ಮೊಬೈಲ್ನಲ್ಲಿ ಚಿತ್ರೀಕರಿಸಲು ಮುಂದಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪೊಲೀಸರು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸದಂತೆ ತಾಕೀತು ಮಾಡಿದರು.
ಚತುಷ್ಪತ ಹೆದ್ದಾರಿ ಅರೆಬರೆ ಕಾಮಗಾರಿಯಿಂದಾಗಿ ಹೆಮ್ಮಾಡಿ ಸರ್ಕಲ್ನಲ್ಲಿ ದಿನನಿತ್ಯ ಎಂಬಂತೆ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿದ್ದು, ಅಪಾಯಕಾರಿ ಸರ್ಕಲ್ ಪಕ್ಕದಲ್ಲೇ ರಸ್ತೆ ಮೇಲೆ ಪೊಲೀಸರು ಜೀಪು ನಿಲ್ಲಿಸಿ ವಾಹನ ತಾಸಣೆ ಮಾಡುವುದರಿಂದ ಇನ್ನಷ್ಟು ಅಪಘಾತಗಳಿಗೆ ದಾರಿಯಾಗುತ್ತದೆ ಎಂದು ಸ್ಥಳೀಯಯರು ಆರೋಪಿಸಿದ್ದಲ್ಲದೇ ಟ್ರಾಫಿಕ್ ಸಿಬ್ಬಂದಿಯ ವರ್ತನೆಯ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.