ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ: ಇಬ್ಬರು ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ ಎನ್‌ಐಎ

ಮಂಗಳೂರು: ಕಳೆದ ವರ್ಷ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ಇಸ್ಲಾಮಿಕ್ ಸ್ಟೇಟ್ ಪ್ರಾಯೋಜಿತ ಪ್ರೆಶರ್ ಕುಕ್ಕರ್ ಬಾಂಬ್ ಸ್ಫೋಟದ ಇಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರದಂದು ಚಾರ್ಜ್‌ಶೀಟ್ ಸಲ್ಲಿಸಿರುವುದಾಗಿ ಎ.ಎನ್.ಐ ವರದಿ ಮಾಡಿದೆ.

ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಶಾರಿಕ್ 2022 ರ ನವೆಂಬರ್ 19 ರಂದು ಆಟೊ ರಿಕ್ಷಾದಲ್ಲಿ ಪ್ರೆಶರ್ ಕುಕ್ಕರ್ ಐಇಡಿ ಅನ್ನು ಒಯ್ಯುತ್ತಿದ್ದಾಗ ಅದು ಸ್ಫೋಟಗೊಂಡಿತ್ತು. ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಹಿಂದೂ ಸಮುದಾಯದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಈತ ಐಇಡಿ ಸ್ಥಾಪಿಸಲು ಯೋಜಿಸಿದ್ದನು ಆದರೆ ಮಾರ್ಗಮಧ್ಯೆ ಕಡಿಮೆ ತೀವ್ರತೆಯ ಬಾಂಬ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂದು ಎನ್‌ಐಎ ಹೇಳಿದೆ.

(RC-47/2022/NIA/DLI) ಐಪಿಸಿಯ ಸೆಕ್ಷನ್ 120B ಮತ್ತು 307 ಮತ್ತು ಸ್ಫೋಟಕ ವಸ್ತುಗಳ ಕಾಯಿದೆ 1908 ರ ಸೆಕ್ಷನ್ 3, 4 ಮತ್ತು 5 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಶಾರಿಕ್ ನನ್ನು ಜುಲೈ 2023 ರಲ್ಲಿ ಆತನ ಸಹ ಆರೋಪಿ ಸೈಯದ್ ಶಾರಿಕ್ ಜೊತೆಗೆ ಎನ್ಐಎ ಬಂಧಿಸಿತ್ತು. ಬಂಧಿತ ಆರೋಪಿಗಳಿಬ್ಬರನ್ನೂ ವಿಚಾರಣೆಗೊಳಪಡಿಸಿ ಇಂದು ಎನ್‌ಐಎ ಆರೋಪಪಟ್ಟಿ ಸಲ್ಲಿಸಿದೆ. ಎನ್‌ಐಎ ತನಿಖೆಯ ಪ್ರಕಾರ, ಶಾರಿಕ್ ಮತ್ತು ಸೈಯದ್, ಆನ್‌ಲೈನ್ ಹ್ಯಾಂಡ್ಲರ್ ಜೊತೆಗೆ ಕ್ಯಾಲಿಫೇಟ್ (ಶರಿಯಾ ಕಾನೂನು) ಸ್ಥಾಪಿಸುವ ಪಿತೂರಿಯ ಭಾಗವಾಗಿ ಸ್ಫೋಟವನ್ನು ಯೋಜಿಸಿದ್ದರು. ಪಿತೂರಿಯಲ್ಲಿ ಮೊಹಮ್ಮದ್ ಶಾರಿಕ್ ಪ್ರೆಶರ್ ಕುಕ್ಕರ್ ಐಇಡಿಯನ್ನು ಸಿದ್ಧಪಡಿಸಿದ್ದನು ಮತ್ತು ಸೈಯದ್ ಯಾಸಿನ್ ಸ್ಫೋಟಕಕ್ಕೆ ಕಚ್ಚಾವಸ್ತು ಒದಗಿಸಿದ್ದನು ಎಂದು ತನಿಖಾ ಸಂಸ್ಥೆ ಹೇಳಿದೆ.

2020 ರ ನವೆಂಬರ್‌ನಲ್ಲಿ ಮಂಗಳೂರು ನಗರದಲ್ಲಿ ಭಯೋತ್ಪಾದನಾ ಪರ ಗೀಚುಬರಹಕ್ಕಾಗಿ ರಾಜ್ಯ ಪೊಲೀಸರು ಮೊಹಮ್ಮದ್ ಶಾರಿಕ್ ನನ್ನು ಬಂಧಿಸಿ ಆ ಬಳಿಕ ಆತ ಜಾಮೀನಿನ ಮೇಲೆ ಹೊರಗೆ ಬಂದಿದ್ದನು. ಆತ ಮತ್ತು ಆತನ ಸಹಚರರು ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (IS) ಅನ್ನು ಬೆಂಬಲಿಸಲು ಗೀಚುಬರಹವನ್ನು ಹಾಕಿದ್ದರು ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.