ಚಿನ್ನಾಭರಣ ಕಳ್ಳನ ಬಂಧನ: ಉಡುಪಿ ನಗರ ಪೊಲೀಸರ ಕಾರ್ಯಾಚರಣೆ

ಉಡುಪಿ: ಇಂದಿರಾನಗರದ ಬಡಗಬೆಟ್ಟು ಗ್ರಾಮದ ಮನೆಯೊಂದರ ಹಿಂಬಾಗಿಲನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಕಳ್ಳನನ್ನು ಬಂಧಿಸುವಲ್ಲಿ ಉಡುಪಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಮಲ್ಲಾರಿನ ತೌಸಿಫ್‌ ಎಂದು ಗುರುತಿಸಲಾಗಿದೆ. ಆರೋಪಿಯು ಕಳ್ಳತನ ಮಾಡಿದ್ದ ಸುಮಾರು 155 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 9 ಲಕ್ಷ ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಯ ವಿರುದ್ದ ಬಂಟ್ವಾಳ, ಪಣಂಬೂರು, ಬಜ್ಪೆ ಠಾಣೆಗಳಲ್ಲಿ ಮನೆಗಳ್ಳತನ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಇನ್‌ಸ್ಪೆಕ್ಟರ್ ಡಿ.ಆರ್. ಮಂಜಪ್ಪ, ಪಿಎಸ್‌ಐ ಈರಣ್ಣ ಶಿರಗುಂಪಿ, ಭರತೇಶ್‌ ಕಂಕಣವಾಡಿ, ಪುನೀತ್‌ ಕುಮಾರ್‌, ಸಿಬ್ಬಂದಿ ಸತೀಶ್‌ ಬೆಳ್ಳೆ, ಚೇತನ್‌, ಆನಂದ, ಎಸ್. ಶಿವಕುಮಾರ್‌, ರಿಯಾಜ್‌ ಅಹಮದ್‌, ವಿಶ್ವನಾಥ ಶೆಟ್ಟಿ,‌ ಕಿರಣ್‌, ಹೇಮಂತ್‌ ಕುಮಾರ್‌, ಓಬಳೇಶ್‌, ರಾಜೇಂದ್ರ ಅವರನ್ನೊಳಗೊಂಡ ತಂಡ ಆರೋಪಿ ತೌಸಿಫ್‌ ಅಹಮದ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.