ಕೋಟೇಶ್ವರ: ಅವಿಭಜಿತ ದ.ಕ ಜಿಲ್ಲೆಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವವು ಸೋಮವಾರದಂದು ಸಂಪನ್ನಗೊಂಡಿತು,
ಪ್ರಾತಃಕಾಲ ದೇವಳದ ತಂತ್ರಿಗಳು ರಥಾರೋಹಣ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವರಿಗೆ ಶತರುದ್ರಾಭಿಷೇಕ ಹಾಗೂ ಇತರ ಧಾರ್ಮಿಕ ಪೂಜೆಗಳು ನಡೆದ ಬಳಿಕ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಜಯಘೋಷ ಹಾಕಿದರು. ಸಂಜೆ ಬಸವನಗುಡಿ ಸನ್ನಿಧಾನದಿಂದ ದೇವರಿಗೆ ಅಭಿಮುಖವಾಗಿ ರಥ ಎಳೆದ ಬಳಿಕ ರಥಾವರೋಹಣ ವಿಧಿ ಸಮಾಪನಗೊಂಡಿತು.
ದೇವಳದ ರಥೋತ್ಸವದ ಸಂದರ್ಭ ಪಾರಂಪರಿಕವಾಗಿ ಗರುಡ ದರ್ಶನವಾಗುತ್ತಿದ್ದು, ಗರುಡ ರಥಕ್ಕೆ ಸುತ್ತು ಹೊಡೆಯುವುದನ್ನು ನೋಡಲು ಭಕ್ತರು ಕಾತುರರಾಗಿದ್ದರು. ಸಮಯಕ್ಕೆ ಸರಿಯಾಗಿ ಗರುಡ ಪಕ್ಷಿಯು ರಥಕ್ಕೆ ಗಿರಕಿ ಹೊಡೆಯುವುದನ್ನು ಭಕ್ತರು ಕಣ್ತುಂಬಿಕೊಂಡರು.
ವಾಡಿಕೆಯಂತೆಯೆ ನವ ವಿವಾಹಿತರು ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಕಬ್ಬಿನ ಕೊಡಿ ಪ್ರಸಾದ ರೂಪದಲ್ಲಿ ಪಡೆದರು. ವರ್ಷಂಪ್ರತಿಯಂತೆ ಸುತ್ತಕ್ಕಿ ಸೇವೆ ಸಲ್ಲಿಸಲಾಯಿತು.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಿಗಿ ಪೊಲೀಸು ಬಂದೋಬಸ್ತು ಏರ್ಪಡಿಸಲಾಗಿತ್ತು.
ಕೊಡಿ ಹಬ್ಬದ ನಿಮಿತ್ತ ನಗರವನ್ನು ವಿದ್ಯುತ್ ದೀಪಗಳಿಂದ ಸಿಂಗಾರಗೊಳಿಸಲಾಗಿತ್ತು.