ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮರಾದ ಯೋಧರಿಗೆ ಅಂತಿಮ ನಮನ ಸಲ್ಲಿಕೆ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಕಾಳಗದಲ್ಲಿ ಹುತಾತ್ಮನಾದ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಅವರ ಪಾರ್ಥಿವ ಶರೀರವನ್ನು ಇಂದು ಸಂಜೆ ಬೆಂಗಳೂರಿಗೆ ಕರೆತರಲಾಗುವುದು ಎಂದು ರಕ್ಷಣಾ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದಿದ್ದ ಗುಂಡಿನ ಚಕಮಕಿಯಲ್ಲಿ 66RR ಬೆಟಾಲಿಯನ್ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರು ಹುತಾತ್ಮರಾಗಿದ್ದಾರೆ.

ತಮ್ಮ ಏಕೈಕ ಪುತ್ರನ ಸಾವಿನಿಂದಾಗಿ ಆಹತರಾಗಿರುವ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಅವರನ್ನು ಹಿತೈಶಿಗಳು ಸಮಾಧಾನ ಪಡಿಸುತ್ತಿದ್ದಾರೆ.

ಮೈಸೂರು ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ತಂದೆ ವೆಂಕಟೇಶ್ ಅವರು ಮಂಗಳೂರಿನ ಎಂ.ಆರ್.ಪಿ.ಎಲ್ ಸಂಸ್ಥೆಯಲ್ಲಿ ಎಂಡಿ ಆಗಿದ್ದರು. ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ಕುಟುಂಬ ಸಹಿತ ವೆಂಕಟೇಶ್ ವಾಸವಿದ್ದರು. ಆದರೆ ಇತ್ತೀಚೆಗೆ ವೆಂಕಟೇಶ್ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರಿಂದ ನಂದನವನದಲ್ಲಿ ನೆಲೆಸಿದ್ದಾರೆ.

ಮಂಗಳೂರು, ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿದ್ದ ಪ್ರಾಂಜಲ್ ಭಾರತೀಯ ಸೇನೆಗೆ ಸೇರಿದ್ದರು. ಅಲ್ಲದೆ, 63 ರಾಷ್ಟ್ರೀಯ ರೈಫಲ್ಸ್​ ತುಕಡಿಯ ನಾಯಕತ್ವ ಹೊಂದಿದ್ದರು.

ಮಂಗಳೂರಿಗೂ ಪ್ರಾಂಜಲ್ ಗೂ ನಂಟಿದ್ದು, ಪ್ರಾಂಜಲ್ ಅವರನ್ನು ವೈಯಕ್ತಿಕವಾಗಿ ಬಲ್ಲವರೆಲ್ಲರೂ ಅವರಿಗಾಗಿ ಕಣ್ಣೀರು ಮಿಡಿಯುತ್ತಿದ್ದಾರೆ.

ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಜಮ್ಮು ಮತ್ತು ಕಾಶ್ಮೀರದ ಎಲ್‌ಜಿ ಮನೋಜ್ ಸಿನ್ಹಾ ಅವರು ಜಮ್ಮುವಿನಲ್ಲಿ ರಜೌರಿ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಸೇನಾ ಸಿಬ್ಬಂದಿಗೆ ಪುಷ್ಪಗುಚ್ಛ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.