ನೇಜಾರು ಹತ್ಯೆ ಪ್ರಕರಣ: ಮಾತು ನಿಲ್ಲಿಸಿದ ಕಾರಣ ಸಹೋದ್ಯೋಗಿಯ ಕೊಲೆಗೈದ ಪ್ರವೀಣ್ ಚೌಗುಲೆ

ಉಡುಪಿ: ನೇಜಾರು ಕೊಲೆಯ ಆರೋಪಿ ಪ್ರವೀಣ್ ಅರುಣ್ ಚೌಗುಲೆ (39) ತನ್ನ ಕಿರಿಯ ಸಹೋದ್ಯೋಗಿ ಅಯ್ನಾಜ್ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ ಕಾರಣ ಅಯ್ನಾಜ್ (21) ಮತ್ತು ಆಕೆಯ ಕುಟುಂಬದ ಮೂವರನ್ನು ಕೊಂದಿದ್ದಾನೆ ಎಂದು ಮಾಹಿತಿ ನೀಡಿದ್ದಾನೆ.

ಉಡುಪಿ ಎಸ್ಪಿ ಡಾ. ಅರುಣ್ ಕೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ತಿಂಗಳ ಹಿಂದೆ ಅಯ್ನಾಜ್ ಆತನ ಜೊತೆ ಮಾತನಾಡುವುದನ್ನು ನಿಲ್ಲಿಸಿದ ನಂತರ ಪ್ರವೀಣ್ ಅವರ ಸ್ನೇಹ ಹದಗೆಟ್ಟಿದೆ. ಅದಕ್ಕೂ ಮೊದಲು, ಅವನು ಎಂಟು ತಿಂಗಳ ಕಾಲ ಅವಳೊಂದಿಗೆ ತುಂಬಾ ಸ್ನೇಹದಿಂದ ಇದ್ದನು ಮತ್ತು ಅಯ್ನಾಜ್ ತನ್ನ ಸಹೋದರಿ ಅಫ್ನಾನ್ ಜೊತೆ ವಾಸಿಸುತ್ತಿದ್ದ ಮನೆಯನ್ನು ಪಡೆಯಲು ಸಹಾಯ ಮಾಡಿದ್ದನು. ಅಯ್ನಾಜ್‌ಗೆ ತನ್ನ ದ್ವಿಚಕ್ರ ವಾಹನವನ್ನೂ ಪ್ರವೀಣ್ ನೀಡಿದ್ದನು ಎಂದು ಮಾಹಿತಿ ನೀಡಿದ್ದಾರೆ.

ಅವನು ಅತಿಯಾದ ವ್ಯಾಮೋಹ ಹೊಂದಿದ್ದನು ಮತ್ತು ಅವಳು ಅವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ ನಂತರ ಅಸಮಾಧಾನಗೊಂಡಿದ್ದನು. ಆದ್ದರಿಂದ ಅವನು ನವೆಂಬರ್ 12 ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನ ತೃಪ್ತಿ ನಗರದಲ್ಲಿರುವ ಆಕೆಯ ಮನೆಗೆ ಬಂದಿದ್ದಾನೆ. ಆ್ಯಪ್ ಮೂಲಕ ಆಕೆಯ ಮನೆಯ ಲೊಕೇಶನ್ ಅನ್ನು ಟ್ರ್ಯಾಕ್ ಮಾಡುವ ಮೂಲಕ ಅಲ್ಲಿಗೆ ತಲುಪಿ ಎಲ್ಲರನ್ನೂ ಕೊಲೆಗೈದಿದ್ದಾನೆ ಎಂದು ಅವರು ಹೇಳಿದ್ದಾರೆ.

ಮನೆಯೊಳಗೆ ಸುಮಾರು 30 ಸೆಕೆಂಡ್‌ಗಳ ಕಾಲ ಆಕೆಯೊಂದಿಗೆ ಮಾತನಾಡಿದ ಪ್ರವೀಣ್, ನಂತರ ಚಾಕುವಿನಿಂದ ಇರಿದಿದ್ದಾನೆ. ಮಧ್ಯಪ್ರವೇಶಿಸಲು ಯತ್ನಿಸಿದ ಆಕೆಯ ತಾಯಿ ಹಸೀನಾ (46), ಅಕ್ಕ ಅಫ್ನಾನ್ (23) ಮತ್ತು ಆಕೆಯ ಕಿರಿಯ ಸಹೋದರ ಅಸೀಮ್ (12) ಸಹ ಕೊಲ್ಲಲ್ಪಟ್ಟಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

ಇದೇ ವೇಳೆ ಚಿನ್ನ ಕಳ್ಳ ಸಾಗಾಣಿಕೆಯ ಕೋನವನ್ನು ತಳ್ಳಿ ಹಾಕಿದ ಎಸ್ಪಿ, ನಾವು ಆ ಕೋನವನ್ನು ಸಹ ತನಿಖೆ ಮಾಡಿದ್ದೇವೆ, ಆದರೆ ಆರೋಪಿ ಉತ್ತಮ ಜೀವನ ನಡೆಸಲು ಉತ್ತಮ ಆದಾಯವನ್ನು ಹೊಂದಿದ್ದ ಎಂದಿದ್ದಾರೆ.