ನ. 30 ರಿಂದ ಡಿಸೆಂಬರ್ 2 ರವರೆಗೆ “ನಡಿಗೆ” ಅಭಿಯಾನ: ಹಳೆ ಪಾದರಕ್ಷೆಗಳಿಗೆ ಹೊಸ ಕಾಯಕಲ್ಪ ನೀಡಿ ಅಗತ್ಯವಿರುವ ಮಕ್ಕಳಿಗೆ ನೀಡುವ ಸದುದ್ದೇಶ

ಉಡುಪಿ: ನ. 30 ರಿಂದ ಡಿಸೆಂಬರ್ 2 ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ “ನಡಿಗೆ” ಅಭಿಯಾನ ನಡೆಯಲಿದೆ. ಮೂವತ್ತೇಳು ವರ್ಷದ ಅವಿನಾಶ್ ಕಾಮತ್ ಅವರು ಸಾರ್ವಜನಿಕರಿಂದ ಹಳೆಯ ಪಾದರಕ್ಷೆಗಳನ್ನು ಸಂಗ್ರಹಿಸಿ ಅವುಗಳನ್ನು ಮರುಬಳಕೆ ಮಾಡುವ ಮತ್ತು ಹೊಸ ಪಾದರಕ್ಷೆಗಳನ್ನು ರಚಿಸುವ ನವಿ ಮುಂಬೈ ಮೂಲದ ‘ಗ್ರೀನ್‌ಸೋಲ್’ ಕಂಪನಿಗೆ ನೀಡಲಿದ್ದಾರೆ. ಗ್ರೀನ್‌ಸೋಲ್ ಕಂಪನಿಯು ಹಳೆಯ ಪಾದರಕ್ಷೆಗಳು ಬ್ಯಾಗ್‌ಗಳು, ಮ್ಯಾಟ್‌ಗಳು ಮತ್ತು ಪೌಚ್‌ಗಳನ್ನು ಮರುಬಳಕೆ ಮಾಡಿ ಆರ್ಥಿಕವಾಗಿ ಹಿಂದುಳಿದವರಿಗೆ ಇವುಗಳನ್ನು ದಾನವಾಗಿ ನೀಡುತ್ತದೆ.

ವೃತ್ತಿಯಲ್ಲಿ ಈವೆಂಟ್ ಪ್ಲಾನರ್ ಮತ್ತು ಆಂಕರ್ ಆಗಿರುವ ಅವಿನಾಶ್, ತಮ್ಮ ಅಭಿಯಾನವು ಎರಡು ಉದ್ದೇಶಗಳನ್ನು ಪೂರೈಸುತ್ತದೆ ಎಂದು ಹೇಳುತ್ತಾರೆ. ಒಂದು, ಹಳೆಯ ಪಾದರಕ್ಷೆಗಳನ್ನು ಸರಿಯಾದ ರೀತಿಯಲ್ಲಿ ನವೀಕರಿಸುವುದು ಮತ್ತೊಂದು ಅವುಗಳನ್ನು ಮರುಬಳಕೆ ಮಾಡುವ ಮೂಲಕ ಉತ್ತಮ ಬಳಕೆಗೆ ತರುವುದು. ಉಡುಪಿಯ 4,000 ನಿರ್ಗತಿಕ ಮಕ್ಕಳಿಗೆ ನವೀಕರಿಸಿದ ಪಾದರಕ್ಷೆಗಳನ್ನು ನೀಡುವ ಗುರಿಯನ್ನು ಅವರು ಹೊಂದಿದ್ದಾರೆ.

ಶ್ರೀಯನ್ಸ್ ಭಂಡಾರಿ ಮತ್ತು ರಮೇಶ್ ಧಾಮಿ ಗ್ರೀನ್‌ಸೋಲ್ ಕಂಪನಿಯನ್ನು ಸ್ಥಾಪಿಸಿದ್ದು, ಅವಿನಾಶ್ ಅವರ ಅಭಿಯಾನದಲ್ಲಿ ಜೊತೆಗೂಡಿದ್ದಾರೆ.

ಆಫೀಸು ಅಥವಾ ಕ್ರೀಡಾ ಶೂಗಳು, ಚಪ್ಪಲಿಗಳು, ಸ್ಯಾಂಡಲ್ಗಳು, ಫೋಮ್ ಮತ್ತು ರಬ್ಬರ್ ಬೂಟುಗಳನ್ನು ಸಂಗ್ರಹಿಸಲಾಗುತ್ತದೆ. ವಿವಿಧ ಸಂಸ್ಥೆಗಳು ಮತ್ತು ಸಂಘಗಳು ತಮ್ಮ ಸ್ಥಳೀಯ ಸಮುದಾಯಗಳಲ್ಲಿ ಈ ಬೂಟುಗಳನ್ನು ಸಂಗ್ರಹಿಸಲು ಮತ್ತು ನಂತರ ಅವುಗಳನ್ನು ಗೊತ್ತುಪಡಿಸಿದ ಸಂಗ್ರಹ ಕೇಂದ್ರಕ್ಕೆ ತಲುಪಿಸಲು ಅವಕಾಶವನ್ನು ಹೊಂದಿವೆ.

ನಗರ ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹಿಸುವವರಿಗೆ ಹಳೆಯ ಪಾದರಕ್ಷೆಗಳನ್ನು ನೀಡಿದರೆ ಅದನ್ನು ಕಸದ ರಾಶಿಗೆ ಹಾಕುತ್ತಾರೆ. ಇದನ್ನು ನಿಲ್ಲಿಸಲು, ಬಳಸಿದ ಶೂಗಳ ಉತ್ತಮ ಮರುಬಳಕೆಯ ಅಗತ್ಯವಿದೆ. ಈ ರೀತಿ ಸ್ವಸ್ಥ ಪರಿಸರಕ್ಕೆ ಈ ರೀತಿಯಲ್ಲಿ ನಾವು ಕೊಡುಗೆ ನೀಡಬಹುದು ಎಂದು ಅವರು ಹೇಳುತ್ತಾರೆ.