ದೆಹರಾದೂನ್: ಉತ್ತರಾಖಂಡದ ಉತ್ತರಕಾಶಿಯಲ್ಲಿ ಕುಸಿದ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಮೊದಲ ದೃಶ್ಯಾವಳಿಗಳು ಮಂಗಳವಾರ ಬೆಳಗ್ಗೆ ಹೊರಬಿದ್ದಿವೆ.
ರಕ್ಷಣಾ ಕಾರ್ಯಕರ್ತರು ಕುಸಿದ ಸಿಲ್ಕ್ಯಾರಾ ಸುರಂಗದ ಅವಶೇಷಗಳ ಮೂಲಕ ಆರು ಇಂಚಿನ ಅಗಲದ ಪೈಪ್‌ಲೈನ್ ಅನ್ನು ಅಳವಡಿಸಿದ ಒಂದು ದಿನದ ನಂತರ ಪ್ರಮುಖ ಬೆಳವಣಿಗೆಯು ಕಂಡು ಬಂದಿದೆ. ಇದು ಕಳೆದ ಒಂಬತ್ತು ದಿನಗಳಿಂದ ಒಳಗೆ ಸಿಲುಕಿರುವ 41 ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದ ಆಹಾರವನ್ನು ಪೂರೈಸಲು ಸಹಾಯ ಮಾಡಲಿದೆ.
ಪರ್ಯಾಯ ಆರು ಇಂಚಿನ ಆಹಾರ ಪೈಪ್‌ಲೈನ್ ಮೂಲಕ ಕಳುಹಿಸಲಾದ ಎಂಡೋಸ್ಕೋಪಿಕ್ ಕ್ಯಾಮೆರಾವನ್ನು ಬಳಸಿಕೊಂಡು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ವೀಡಿಯೊದಲ್ಲಿ, ಕಾರ್ಮಿಕರು ಹಳದಿ ಮತ್ತು ಬಿಳಿ ಹೆಲ್ಮೆಟ್‌ಗಳನ್ನು ಧರಿಸಿ ಪೈಪ್‌ಲೈನ್ ಮೂಲಕ ಕಳುಹಿಸಲಾದ ಆಹಾರ ಪದಾರ್ಥಗಳನ್ನು ಸ್ವೀಕರಿಸಿ ಪರಸ್ಪರ ಮಾತನಾಡುತ್ತಿರುವುದು ಕಂಡುಬರುತ್ತಿದೆ. ಇದು ಈ ಕಾರ್ಮಿಕರ ಕುಟುಂಬಗಳಿಗೆ ದೊಡ್ಡ ನಿರಾಳತೆಯನ್ನು ಒದಗಿಸಿದೆ.
ಉತ್ತರಾಖಂಡದ ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಕುಸಿದ ಭಾಗದ ಅವಶೇಷಗಳ ಆಚೆಗೆ ಸುರಂಗದ ಭಾಗಕ್ಕೆ ಆಮ್ಲಜನಕ ಮತ್ತು ಒಣ ಹಣ್ಣುಗಳು ಮತ್ತು ಔಷಧಿಗಳಂತಹ ವಸ್ತುಗಳನ್ನು ಸರಬರಾಜು ಮಾಡಲು ನಾಲ್ಕು ಇಂಚಿನ ಅಸ್ತಿತ್ವದಲ್ಲಿರುವ ಟ್ಯೂಬ್ ಅನ್ನು ಬಳಸಲಾಗುತ್ತಿದೆ.
ಕಳೆದ ಒಂಬತ್ತು ದಿನಗಳಿಂದ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಇನ್ನಿಲ್ಲದ ಸಾಹಸ ನಡೆಯುತ್ತಿದ್ದರೂ ಬೆಟ್ಟದಿಂದ ಮಣ್ಣು ಕುಸಿಯುತ್ತಿರುವುದರಿಂದ ರಕ್ಷಣಾ ಕಾರ್ಯದಲ್ಲಿ ಬಾಧೆ ಎದುರಾಗುತ್ತಿದೆ. ಇದೀಗ ಕಾರ್ಮಿಕರು ಸಿಲುಕಿರುವ ಜಾಗದಲ್ಲಿ ಲಂಬವಾಗಿ ಡ್ರಿಲ್ ಮಾದುವ ಕಾರ್ಯಾಚರಣೆಗೆ ರಕ್ಷಣಾ ಪಡೆಗಳು ಸಜ್ಜಾಗಿವೆ.












