ಬೆಂಗಳೂರು : ಇಲಾಖೆಯಲ್ಲಿ ಜವಾಬ್ದಾರಿ ಹೊತ್ತ ಮೂವರ ವಿರುದ್ಧ ದೂರು ನೀಡಲಾಗಿದೆ. ಇಲಾಖೆಯು ಅಂಗನವಾಡಿಯಲ್ಲಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡಲು ನೀಡಿರುವ ಟೆಂಡರ್ ವಿಚಾರದಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಿದ್ದಾರೆ.ಮಕ್ಕಳು ಹಾಗೂ ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡಲು ಅನರ್ಹ ಸಂಸ್ಥೆಗಳಿಗೆ ನೀಡಿದ ಗುತ್ತಿಗೆಯಲ್ಲಿ ಸುಮಾರು 600 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಸ್ ನಟರಾಜ ಶರ್ಮಾ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮಕ್ಕಳು ಹಾಗೂ ಗರ್ಭಿಣಿಯರಿಗೆ ನೀಡುವ ಆಹಾರ ಸರಬರಾಜಿನಲ್ಲಿ ಗೋಲ್‌ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ.
ನಿಯಮ ಉಲ್ಲಂಘಿಸಿ ಬ್ಲಾಕ್ ಲಿಸ್ಟ್ ಕಂಪನಿಗೆ ಟೆಂಡರ್ ನೀಡಿ ಸುಮಾರು 600 ಕೋಟಿ ಅವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಇಲಾಖೆಯ ಮೂವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ನಟರಾಜ್ ಅವರು ತಿಳಿಸಿದ್ದಾರೆ.ಈ ಹಿಂದೆ ಕಪ್ಪು ಪಟ್ಟಿಯಲ್ಲಿರುವ ಕಂಪನಿ ಜೊತೆ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಟೆಂಡರ್ ನೀಡಿದ್ದು, ಗುತ್ತಿಗೆದಾರರಿಂದ ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಕಳಪೆ ಗುಣಮಟ್ಟದ್ದಾಗಿತ್ತು. ಹೀಗಾಗಿ ಸ್ಥಳೀಯ ಸೇವಾ ಸಂಘಗಳೇ ಆಹಾರ ಪೂರೈಕೆ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆದರೆ ಆದೇಶ ಉಲ್ಲಂಘಿಸಿ ಬ್ಲಾಕ್ ಲಿಸ್ಟ್ನಲ್ಲಿರುವ ಕಂಪನಿಗೆ ಟೆಂಡರ್ ನೀಡಿರುವುದಾಗಿ ದೂರಿನಲ್ಲಿ ನಟರಾಜ ಶರ್ಮಾ ಉಲ್ಲೇಖಿಸಿದ್ದಾರೆ.