ಉಡುಪಿ: ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ (57) ಹೃದಾಯಾಘಾತದಿಂದ ನಿಧನ ಹೊಂದಿದ್ದಾರೆ. ಗುರವಾರ ಮುಂಜಾನೆ ಉಡುಪಿಯ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ನಗರದ ಆಸ್ಪತ್ರೆಗೆ ಸಾಗಿಸಲಾಗಿದೆ. ಹೃದಯಾಘಾತ ದೃಢಪಟ್ಟ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಹೆಮ್ಮಣ್ಣ ಅವರು ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಮ್ಮಣ್ಣ, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
1991 ರಲ್ಲಿ ಕುಂದಪ್ರಭ ಪತ್ರಿಕೆಯ ಮೂಲಕ ವೃತ್ತಿ ಜೀವನ ಅರಂಭಿಸಿದ ಶಶಿಧರ್ ಹೆಮ್ಮಣ್ಣ, “ಕ್ಷಿತಿಜ” ಎನ್ನುವ ಸ್ವಂತ ವಾರ ಪತ್ರಿಕೆ ಅರಂಭಿಸಿ , ಮುಖ್ಯ ಸಂಪಾದಕರಾಗಿದ್ದರು. ಬಳಿಕ ಈ ಟಿವಿ ಕನ್ನಡ , ಡಿಡಿ ನ್ಯೂಸ್ ನಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಹಲವು ಉದಯೋನ್ಮುಖ ಪತ್ರಕರ್ತರಿಗೆ ಪ್ರೇರಕರಾಗಿದ್ದ ಹೆಮಣ್ಣ ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೃಷಿ ಸಂಬಂಧಿತ ಲೇಖನಗಳನ್ನು ಬರೆದು ಸರಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕನೆಕ್ಟ್ ಮಿಡಿಯಾ ಸಂಸ್ಥೆಯನ್ನು ಸ್ಥಾಪಿಸಿದ್ದ ಇವರು ರಾಜ್ಯದಾದ್ಯಂತ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಕ್ರಿಯರಾಗಿದ್ದರು. ರಾಜಕೀಯ ಸಮೀಕ್ಷೆ, ಪರಿಸರ ಕಾಳಜಿ ಕಾಂಡ್ಲವನ ಯೋಜನೆಗಳಲ್ಲಿ ತೊಡಗಿಸಿಕೊಂಡು ಮನೆಮಾತಾಗಿದ್ದರು.
ಮೃತರು ತಂದೆ ತಾಯಿ,ಪತ್ನಿ , ಪುತ್ರ , ನಾಲ್ಕು ಜನ ಸಹೋದರು ಹಾಗೂ ಸಹೋದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಅಂತ್ಯಕ್ರಿಯನ್ನು ಕುಂದಾಪುರ ತಾಲೂಕಿನ ಕಮಲ ಶಿಲೆ ಸಮೀಪದ ಎಡಮೊಗೆಯಲ್ಲಿರುವ ಕುಟುಂಬದ ಸ್ವಗೃಹದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.