ಬೆಂಗಳೂರು: ನ. 17 ರಿಂದ 20ರ ವರೆಗೆ ಕೃಷಿ ಮೇಳ 2023 ಆಯೋಜನೆ: ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು ಘೋಷ ವಾಕ್ಯ

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಕೃಷಿ ಮೇಳ 2023ರ ದಿನಾಂಕ ಘೋಷಣೆ ಮಾಡಿದೆ. ನಗರದ ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ಯಲ್ಲಿ ಕೃಷಿ ಮೇಳ 2023 ನವೆಂಬರ್ 17 ರಿಂದ 20ರ ತನಕ ನಡೆಯಲಿದೆ. ಕೃಷಿ ಮೇಳದಲ್ಲಿ ಮೊದಲ ಬಾರಿಗೆ ‘ಬೀಜ ಸಂತೆ’ ಆಯೋಜನೆ ಮಾಡುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ಬರಗಾಲದ ಹಿನ್ನಲೆಯಲ್ಲಿ ಈ ಬಾರಿ ಬೀಜ ಸಂತೆ ಆಯೋಜನೆ ಮಾಡಲಾಗುತ್ತಿದೆ. ಈ ಬಾರಿಯ ಕೃಷಿ ಮೇಳದ ಘೋಷವಾಕ್ಯ ‘ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು’ ಎಂಬುದಾಗಿದೆ.

ಈ ಬಾರಿಯ ಕೃಷಿ ಮೇಳದ ವಿಶೇಷತೆಗಳಲ್ಲಿ ಬೀಜೋತ್ಪಾದನೆಯಿಂದ ಆದಾಯಗಳಿಸಲು ರೈತರಿಗೆ ಮಾರ್ಗದರ್ಶನ, ಸಿರಿಧಾನ್ಯ, ಎಣ್ಣೆಕಾಳು ಮತ್ತು ತರಕಾರಿ ಬೀಜಗಳ ಮಾರಾಟ, ಬರಗಾಲದಲ್ಲಿ ಕಡಿಮೆ ನೀರು ಬಳಕೆ ಮಾಡಿಕೊಂಡು ತಳಿಗಳನ್ನು ಬೆಳೆಯಲು ಉತ್ತೇಜನ ನೀಡುವುದು ಸೇರಿವೆ.

ವಿಜ್ಞಾನಿಗಳ ಸಹಭಾಗಿತ್ವದಲ್ಲಿ ಸುಮಾರು ಸಾವಿರ ರೈತರು 1500 ಎಕರೆಗೂ ಅಧಿಕ ಪ್ರದೇಶದಲ್ಲಿ ಬೀಜೋತ್ಪಾದನೆ ಕೈಗೊಂಡಿದ್ದಾರೆ. ಇಂತಹ ಜಮೀನುಗಳಲ್ಲಿ ಬೆಳೆದ ಬೀಜಗಳನ್ನು ಸಂಸ್ಕರಣೆ ಮಾಡಿ, ಕೃಷಿ ಮೇಳದಲ್ಲಿ ಮಾಹಿತಿ ನೀಡಿ, ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಕೃಷಿ ಮೇಳದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ, ಕರ್ನಾಟಕ ರಾಜ್ಯ ಎಣ್ಣೆಕಾಳು ಅಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆ, 100ಕ್ಕೂ ಅಧಿಕ ಖಾಸಗಿ ಕಂಪನಿಗಳು ಬೀಜೋತ್ಪಾದನೆ, ಸಂಸ್ಕರಣೆ, ಮಾರುಕಟ್ಟೆ, ಮಾರಾಟದ ಕುರಿತು ರೈತರ ಜೊತೆ ಮಾಹಿತಿ ಹಂಚಿಕೊಳ್ಳಲಿವೆ.

ವಿಶೇಷ ಆಕರ್ಷಣೆಗಳು

  • ಕೃಷಿಯ ನೂತನ ತಂತ್ರಜ್ಞಾನದ ಮಾಹಿತಿ, ಜಲಾನಯನ ನಿರ್ವಹಣೆ ಬಗ್ಗೆ ಅಗತ್ಯ ಮಾಹಿತಿ ಹಂಚಿಕೆ
  • ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಾಣಿಕೆ ಬಗ್ಗೆ ಮಾಹಿತಿ
  • ಸಿರಿಧಾನ್ಯಗಳ ಕೃಷಿ, ಮಾರುಕಟ್ಟೆ ಹಾಗೂ ಮಹತ್ವದ ಕುರಿತು ಮಾಹಿತಿ ಹಂಚಿಕೆ
  • ಮಳೆ, ಮೇಲ್ಛಾವಣಿ ನೀರು ಕೊಯ್ಲು ಕುರಿತು ಮಾಹಿತಿ
  • ಕೃಷಿಯಲ್ಲಿ ಡ್ರೋನ್ ಬಳಕೆ, ನೂತನ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ
  • ಹನಿ, ತುಂತುರು ಮತ್ತು ಸಾವಯವ ಕೃಷಿಯ ಕುರಿತು ಅಗತ್ಯ ಮಾಹಿತಿ ಹಂಚಿಕೆ
  • ಸುಧಾರಿತ ಕೃಷಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ
  • ಸಮಗ್ರ ಬೇಸಾಯ ಪದ್ಧತಿಗಳ ಕುರಿತು ಪ್ರಾತ್ಯಕ್ಷಿಕೆಗಳು