ಈಗಲೇ ಮಾಲಿನ್ಯದಿಂದ ತತ್ತರಿಸಿರುವ ಜನತೆಯಲ್ಲಿ ಆತಂಕ :ದೆಹಲಿಯಲ್ಲಿ ಮತ್ತೆ ಪ್ರಬಲ ಭೂಕಂಪನದ ಅನುಭವ

ನವದೆಹಲಿ: ಪಶ್ಚಿಮ ನೇಪಾಳದಲ್ಲಿ ಸೋಮವಾರ ಮತ್ತೆ 5.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಷ್ಟ್ರರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್ರಬಲ ಕಂಪನದ ಅನುಭವವಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.ಇಂದು ಸಂಜೆ 4:16ಕ್ಕೆ ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಾದ ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್, ಫರಿದಾಬಾದ್ ಸೇರಿದಂತೆ ಹಲವೆಡೆ ಭೂಕಂಪನದ ಅನುಭವವಾಗಿದೆ. ದೆಹಲಿಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ನೇಪಾಳದಲ್ಲಿರುವ ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.6ರಷ್ಟಿತ್ತು ಎಂದು ತಿಳಿದು ಬಂದಿದೆ.

ನೆರೆಯ ನೇಪಾಳದಲ್ಲಿ ಪದೆ ಪದೇ ನೈಸರ್ಗಿಕ ವಿಕೋಪ ಕಂಡುಬರುತ್ತಿದ್ದು ಎರಡು ದಿನದ ಹಿಂದೆ ಸಂಭವಿಸಿದ ಭೂಕಂಪದಲ್ಲಿ 157ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಶುಕ್ರವಾರ ಮೊದಲು 6.4 ತೀವ್ರತೆಯ ಭೂಕಂಪ ಉಂಟಾಗಿತ್ತು. ಸೋಮವಾರ ಬೆಳಗ್ಗೆ 3.6 ತೀವ್ರತೆಯ ಮತ್ತೊಂದು ಭೂಕಂಪದ ಅನುಭವವಾಗಿದೆ. ಬೆಳಗಿನ ಜಾವ 4:38ರ ಸುಮಾರಿಗೆ ರಾಜಧಾನಿ ಕಠ್ಮಂಡುವಿನಿಂದ ವಾಯುವ್ಯಕ್ಕೆ 169 ಕಿಮೀ ದೂರ, 10 ಕಿಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಆದರೆ, ಈ ಭೂಕಂಪದಲ್ಲಿ ಯಾವುದೇ ಸಾವು-ನೋವು, ಹಾನಿಯ ಬಗ್ಗೆ ವರದಿಯಾಗಿಲ್ಲ.

ಶುಕ್ರವಾರ ರಾತ್ರಿಯೂ ದೆಹಲಿ – ಎನ್‌ಸಿಆರ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಅಂದೇ ಉತ್ತರಪ್ರದೇಶ ರಾಜಧಾನಿ ಲಖನೌ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಧ್ಯಾಹ್ನ 2:53ರ ಸುಮಾರಿಗೆ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿದ್ದು, ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಕಂಡು ಬಂದಿತ್ತು. ಸದ್ಯದ ಮಾಹಿತಿ ಪ್ರಕಾರ ಅದೃಷ್ಟವಶಾತ್​ ದೇಶದಲ್ಲಿ ಸಂಭವಿಸಿದ ಈ ಭೂಕಂಪದಿಂದ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಇನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದಿಂದ ತತ್ತರಿಸಿರುವ ಜನತೆಗೆ ಪದೇ ಪದೆ ಭೂಕಂಪದ ಆತಂಕವೂ ಹೆಚ್ಚಾಗುತ್ತಿದೆ.

ಪಟ್ಟಣ ಪ್ರದೇಶದಲ್ಲಿ ಕಾಂಕ್ರೀಟ್​​ ಮನೆಗಳು ಸಹ ಹಾನಿಯಾಗಿವೆ. 157 ಸಾವುಗಳ ಪೈಕಿ 120 ಮಂದಿಯ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಸುಮಾರು 253 ಜನರು ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ಸಂಭವಿಸಿದ ಭೂಕಂಪದಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದು ನೂರಾರು ಮನೆಗಳು ನೆಲಸಮವಾಗಿದೆ. ಜನತೆ ರಾತ್ರಿಗಳನ್ನು ಬಯಲಲ್ಲೇ ಕಳೆಯುವಂತೆ ಆಗಿದೆ. ಜಾಜರ್‌ಕೋಟ್ ಜಿಲ್ಲೆಯ ಹಳ್ಳಿಗಳಲ್ಲಿನ ಹೆಚ್ಚಿನ ಮನೆಗಳು ಕುಸಿದು ಬಿದ್ದಿವೆ. ಮತ್ತಷ್ಟು ತೀವ್ರವಾಗಿ ಹಾನಿಗೊಳಗಾಗಿವೆ.