ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ: ಕನಿಷ್ಠ 129 ಸಾವು; ಭಾರತದ ಗಡಿ ಜಿಲ್ಲೆಗಳಲ್ಲೂ ಕಂಪನದ ಅನುಭವ

ಕಾಠ್ಮಂಡು: ನೇಪಾಳದ ವಾಯುವ್ಯ ಜಿಲ್ಲೆಗಳಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ 6.4 ತೀವ್ರತೆಯ ಭೂಕಂಪನದ ನಂತರ ಪಶ್ಚಿಮ ನೇಪಾಳದ ಜಜರ್ಕೋಟ್ ಮತ್ತು ರುಕುಮ್ ಜಿಲ್ಲೆಗಳಲ್ಲಿ ಜಜರ್ಕೋಟ್ ಉಪಮೇಯರ್ ಸೇರಿದಂತೆ ಸುಮಾರು 129 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ನೇಪಾಳದ ದೂರದರ್ಶನ ತಿಳಿಸಿದೆ.

ರಾಜಧಾನಿ ಕಠ್ಮಂಡುವಿನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಜಾಜರ್‌ಕೋಟ್ ಜಿಲ್ಲೆಯ ಲಾಮಿಡಾಂಡ ಪ್ರದೇಶದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ತಿಳಿಸಿದೆ. ಭೂಕಂಪನದ ಪರಿಣಾಮ ದೆಹಲಿ ಮತ್ತು ಅಕ್ಕಪಕ್ಕದ ರಾಜ್ಯಗಳು ತತ್ತರಿಸಿವೆ.

ಗಾಯಗೊಂಡವರ ತಕ್ಷಣದ ರಕ್ಷಣೆ ಮತ್ತು ಪರಿಹಾರಕ್ಕಾಗಿ ದೇಶದ ಎಲ್ಲಾ ಮೂರು ಭದ್ರತಾ ಏಜೆನ್ಸಿಗಳನ್ನು ಸಜ್ಜುಗೊಳಿಸಲಾಗಿದೆ ಎಂದು ನೇಪಾಳದ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ಡೈಲೇಖ್, ಸಾಲ್ಯಾನ್ ಮತ್ತು ರೋಲ್ಪಾ ಜಿಲ್ಲೆಗಳು ಸೇರಿದಂತೆ ಇತರ ಜಿಲ್ಲೆಗಳಿಂದಲೂ ಗಾಯಗಳು ಮತ್ತು ಆಸ್ತಿ ಹಾನಿಯ ವರದಿಗಳು ಬರುತ್ತಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಜಿಲ್ಲೆಯಲ್ಲಿ ಕನಿಷ್ಠ 34 ಜನರು ಸಾವನ್ನಪ್ಪಿದ್ದರೆ, ರುಕುಮ್ ಪಶ್ಚಿಮ ಜಿಲ್ಲೆಯಲ್ಲಿ 35 ಸಾವುಗಳು ವರದಿಯಾಗಿವೆ ಎಂದು ಜಜರ್ಕೋಟ್‌ನ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಒಟ್ಟು 30 ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರದ ಭೂಕಂಪನವು ದೆಹಲಿ-ಎನ್‌ಸಿಆರ್, ಪಾಟ್ನಾ, ಕತಿಹಾರ್, ಮೋತಿಹಾರಿ ಮತ್ತು ಭಾರತ-ನೇಪಾಳ ಗಡಿಯಲ್ಲಿರುವ ಬಿಹಾರದ ಹಲವಾರು ಜಿಲ್ಲೆಗಳಲ್ಲಿ ಅನುಭವವಾಗಿದೆ.