ಬೆಂಗಳೂರು: ರಾಜಧಾನಿಯ ಕೆಂಗೇರಿ ಬಳಿ ಇತ್ತೀಚೆಗೆ ‘ಅಕ್ಟೋಬರ್ ಬೈಕರ್ಸ್ ಫೆಸ್ಟ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಡಾ. ಪುನೀತ್ ರಾಜ್ಕುಮಾರ್ ಅವರ ಎರಡನೇ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಎಲ್ಲಾ ಬೈಕರ್ಸ್ ಅಪ್ಪು ಅವರನ್ನು ಸ್ಮರಿಸಿ ಬೊಂಬೆ ಹೇಳುತೈತೆ ಹಾಡನ್ನು ಆಲಿಸಿದರು. ರಾಜ್ಯದ ವಿವಿಧ ಜಿಲ್ಲೆಯ ಬೈಕ್ ರೇಸರ್ಸ್ ಇಲ್ಲಿ ಜಮಾಯಿಸಿದ್ದರು.ಅರವಿಂದ್ ಕೌಶಿಕ್ ನಿರ್ದೇಶನದ ‘ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾದ ʻಆರಂಭʼ ಎಂಬ ಹಾಡು ಬಿಡುಗಡೆಯಾಗಿದೆ.
‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರದ ಮೂಲಕ ಅರವಿಂದ್ ಕೆ.ಪಿ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ. ಬಿಗ್ ಬಾಸ್ ಶೋ ಮೂಲಕ ಹೆಸರು ಮಾಡಿದ ಅರವಿಂದ್ ಅವ್ರು ಒಬ್ಬ ಬೈಕ್ ರೇಸರ್. ‘ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾದಲ್ಲಿ ಅರವಿಂದ್ ರೇಸರ್ ಆಗಿಯೇ ಕಾಣಿಸಿಕೊಳ್ಳುತ್ತಿರೋದು ವಿಶೇಷ. ಜೊತೆಗೆ ಬೈಕ್ ರೇಸರ್ಸ್ಗಳ ನಡುವೆಯೇ ಈ ಹಾಡು ಅನಾವರಣಗೊಂಡಿರುವುದು ನಿಜಕ್ಕೂ ಸ್ಪೆಷಲ್. ರೀಲ್ ಮಾತ್ರವಲ್ಲದೇ ರಿಯಲ್ ಲೈಫ್ನಲ್ಲಿ ಜೋಡಿಯಾಗಲಿರುವ ದಿವ್ಯಾ ಉರುಡುಗ ಮತ್ತು ಅರವಿಂದ್ ಈ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಅರವಿಂದ್ ಕೌಶಿಕ್ ನಿರ್ದೇಶನದ ‘ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾದ ʻಆರಂಭʼ ಎನ್ನುವ ಹಾಡನ್ನು ಬಿಡುಗಡೆ ಮಾಡಲಾಯಿತು. ʻʻಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸದಾ ಹೊಸತನಕ್ಕೆ ತೆರೆದುಕೊಳ್ಳುತ್ತಿದ್ದರು. ಸಿನಿಮಾ ನಟನೆಯ ಜೊತೆಗೆ ಅಡ್ವೆಂಚರ್ ಅನ್ನು ತುಂಬಾನೇ ಇಷ್ಟ ಪಡುತ್ತಿದ್ದರು. ಅಪ್ಪು ಅವರ ಪುಣ್ಯ ಸ್ಮರಣೆಯ ಈ ಘಳಿಗೆಯಲ್ಲಿ ಬಿಡುಗಡೆ ಮಾಡುತ್ತಿರುವ ʼಆರಂಭʼ ಹಾಡನ್ನು ಅವರಿಗೆ ಅರ್ಪಿಸುತ್ತಿದ್ದೇವೆ” ಎಂದು ಈ ವೇಳೆ ನಿರ್ದೇಶಕರು ತಿಳಿಸಿದರು.
ಬಕ್ಸಸ್ ಮೀಡಿಯಾ, ಆರ್ಎಸಿ ವಿಷುವಲ್ಸ್ ಮತ್ತು ಲೈಟ್ ಹೌಸ್ ಮೀಡಿಯಾದ ಸಹಕಾರದೊಂದಿಗೆ ಈ ಚಿತ್ರವನ್ನು ನಿರ್ಮಿಸಿದೆ. ರ್ಯಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿಶ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯನಟ ದ್ವಾರಕೀಶ್ ಪುತ್ರ ಅಭಿಲಾಷ್ ವಿಶೇಷ ಪಾತ್ರದ ಮೂಲಕ 25 ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸೂರ್ಯ ಅವರ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.ಇತ್ತೀಚೆಗಷ್ಟೇ ಸಿನಿಮಾದ ‘ಹುಚ್ಚುಮನಸಿನ ಹುಡುಗಿ’ ಎನ್ನುವ ಹಾಡು ಬಿಡುಗಡೆಗೊಂಡಿತ್ತು. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡಿಗೆ ವಾಸುಕಿ ವೈಭವ್ ದನಿಯಾಗಿದ್ದರು. ಈ ಹಾಡು A2 ಮ್ಯೂಸಿಕ್ ಚಾನಲ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು, ಹಿಟ್ ಅನ್ನಿಸಿಕೊಂಡಿದೆ. ಈಗ ‘ಆರಂಭ’ ಕೂಡ ಮೋಟಿವೇಷನಲ್ ಸಾಂಗ್ ಆಗಿ ಹೊರಹೊಮ್ಮಿದೆ. ಈ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ ಅನ್ನೋದು ನಾಯಕ ನಟಿ ದಿವ್ಯಾ ಉರುಡುಗ ಅಭಿಪ್ರಾಯ.