ಬೆಂಗಳೂರು: ಕರ್ನಾಟಕ 50ರ ಸಂಭ್ರಮಾಚರಣೆಯಲ್ಲಿದೆ. ಪ್ರಗತಿಪರ ರಾಜ್ಯವಾದ ಕರ್ನಾಟಕ ಯಾವತ್ತೂ ವಿಕಾಸದ ಹಾದಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ.ಕರುನಾಡಿಗೆ 50 ವರ್ಷದ ಸಂಭ್ರಮ. ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದೆ. ಪ್ರಗತಿಶೀಲ ರಾಜ್ಯವಾಗಿರುವ ಕರುನಾಡು ತನ್ನ ಐವತ್ತು ವರ್ಷದ ಪಯಣದಲ್ಲಿ ದೇಶದ ಅಭಿವೃದ್ಧಿಗಾಗಿ ಹಲವು ಕೊಡುಗೆಗಳನ್ನು ಕೊಡುತ್ತಿದೆ. ಪ್ರಜ್ಞಾವಂತರ ನಾಡಾಗಿರುವ ಕರ್ನಾಟಕ ವಿಕಾಸದ ಹಾದಿಯಲ್ಲಿ ಸಮಯದ ಜೊತೆಗೆ ಹಲವಾರು ತಿರುವುಗಳನ್ನು ಪಡೆಯುತ್ತಾ ಅಭಿವೃದ್ಧಿಯ ಪಥದತ್ತ ಮುನ್ನುಗ್ಗುತ್ತಾ ಸಾಗಿ ಬಂದಿದೆ. ಹೀಗಾಗಿ ಕರ್ನಾಟಕ ದೇಶದ ಟಾಪ್ ಐದು ರಾಜ್ಯಗಳ ಆರ್ಥಿಕತೆಗಳಲ್ಲಿ ಒಂದಾಗಿದೆ. ಎಲ್ಲಾ ಹೊಸತನಗಳಿಗೆ ತನ್ನನ್ನು ತೆರೆದು ಆಧುನಿಕತೆ, ನಾವೀನ್ಯತೆಗಳನ್ನು ಮೈಗೂಡಿಸಿ ವಿಕಾಸದ ಆರ್ಥಿಕತೆಯನ್ನು ಮೇಲ್ಪಂಕ್ತಿ ಹಾಕುತ್ತಾ ಸಾಗಿದೆ.
ರಾಜ್ಯದ ಆರ್ಥಿಕತೆಗೆ ಬಜೆಟ್ ಬಲ : ರಾಜ್ಯದಲ್ಲಿ ಚುನಾಯಿತ ಸರಕಾರ ರಚನೆ ಬಳಿಕ ಮೊಟ್ಟ ಮೊದಲ ಬಜೆಟ್ ಮಂಡಿಸಿದವರು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ. ಆ ಬಳಿಕ ಪರಿಷ್ಕೃತ ಆಯವ್ಯಯಗಳೂ ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆ 77 ಬಜೆಟ್‌ಗಳು ಮಂಡನೆಯಾಗಿವೆ. ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು 1952-53ರಲ್ಲಿ 21 ಕೋಟಿ ರೂಗಳ ಬಜೆಟ್ ನ್ನು ಮೊದಲ ಬಾರಿಗೆ ಮಂಡಿಸಿದ್ದರು. ಇಂತಹ ಪ್ರಗತಿಪರ ರಾಜ್ಯದ ಮೊದಲ ಬಜೆಟ್‌ನ ಗಾತ್ರ 21.03 ಕೋಟಿ ರೂಪಾಯಿ ಇತ್ತು. ಇದೀಗ ರಾಜ್ಯದ ಬಜೆಟ್‌ನ ಗಾತ್ರ 3 ಲಕ್ಷ ಕೋಟಿ ರೂಪಾಯಿ ದಾಟಿದೆ. 21 ಕೋಟಿ ರೂಪಾಯಿಯಿಂದ ಪ್ರಾರಂಭವಾದ ರಾಜ್ಯದ ಬಜೆಟ್ ಯಾತ್ರೆ ಸದ್ಯಕ್ಕೆ 3.27 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಆ ಮೂಲಕ ರಾಜ್ಯದ ಆರ್ಥಿಕ ಪ್ರಗತಿಗೆ ಪೂರಕವಾದ ಅಡಿಗಲ್ಲು ಹಾಕುತ್ತಾ ಸಾಗಲಾಯಿತು.
ಕಾಲದಿಂದ ಕಾಲಕ್ಕೆ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳಿಂದ ರಾಜ್ಯ ಪ್ರಗತಿಶೀಲ ರಾಜ್ಯಗಳಲ್ಲಿ ಅಗ್ರಗಣ್ಯವಾಗಿದೆ. ಕರುನಾಡು ದೇಶದ ವಿಕಾಸದ ಎಂಜಿನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1960ರಲ್ಲಿ ಸುಮಾರು 296 ರೂಪಾಯಿ ಇದ್ದ ರಾಜ್ಯದ ತಲಾ ಆದಾಯ ಇದೀಗ ಸರಾಸರಿ 3.32 ಲಕ್ಷ ರೂಪಾಯಿಗೆ ತಲುಪಿದೆ. ಇದು ರಾಜ್ಯದ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ. 7.9% ಜಿಡಿಪಿ ಪ್ರಗತಿ ಕಾಣಲಿರುವ ಕರುನಾಡು ತನ್ನ ವೇಗದ ಗತಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಲೇ ಇದೆ. ಸರ್ಕಾರಗಳ ಆದಾಯ ಹೆಚ್ಚಿಸುವ ಅನೇಕ ಕ್ರಮ, ಜನರ ಜೀವನಮಟ್ಟ ಹೆಚ್ಚಿಸುವ ಉಪಕ್ರಮಗಳು ಕರುನಾಡನ್ನು ಉತ್ತುಂಗಕ್ಕೇರಿಸುವತ್ತ ಕೊಂಡೊಯ್ಯುತ್ತಿದೆ. ರಾಜ್ಯದ ಬಜೆಟ್ ಇತಿಹಾಸವನ್ನು ಅವಲೋಕಿಸಿದರೆ ಅಭಿವೃದ್ಧಿಯ ಪಥ ಹೇಗೆ ಸಾಗಿ ಬಂದಿದೆ ಎಂಬುದರ ಸ್ಥೂಲ ಚಿತ್ರಣ ದೊರಕುತ್ತದೆ.
ಮೊದಲ ಬಜೆಟ್ ಗಾತ್ರ ಬರೇ 21 ಕೋಟಿ: ಕರ್ನಾಟಕ ಏಕೀಕರಣದ ಬಳಿಕ 1952-53ರಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ರಾಜ್ಯದ ಮೊದಲ ಮುಂಗಡ ಪತ್ರವನ್ನು ಮಂಡಿಸಿದರು. ಕೆಂಗಲ್ ಅವರು ಮಂಡಿಸಿದ್ದ ಮೊದಲ ಬಜೆಟ್ ಗಾತ್ರ ಬರೇ 21.03 ಕೋಟಿ ರೂ. ಆಗಿನ ಆರ್ಥಿಕತೆಯ ಇತಿಮಿತಿಯೊಳಗೆ ಕೆಂಗಲ್ ಹನುಮಂತಯ್ಯ ಅವರು ಬಜೆಟ್ ತಯಾರಿಸಿದ್ದರು. ಒಟ್ಟು 4 ಬಜೆಟ್ ನೀಡಿದ್ದ ಕೆಂಗಲ್ ಅವರ ಕಡೆಯ ಆಯವ್ಯಯದ ಗಾತ್ರ 30 ಕೋಟಿ ರೂ. ಆಗಿತ್ತು.
ಕೆಂಗಲ್ ನಂತರ ವಿತ್ತ ಸಚಿವರಾದ ಟಿ.ಮರಿಯಪ್ಪ 1957-58ರಲ್ಲಿ ಮಂಡಿಸಿದ ಬಜೆಟ್ ಗಾತ್ರ 60.28 ಕೋಟಿ ರೂ.ಗೆ ಏರಿಕೆಯಾಗಿತ್ತು. ಬಳಿಕ 1962-63ರಲ್ಲಿ ಮಂಡಿಸಿದ ಕರ್ನಾಟಕದ ಬಜೆಟ್ ಗಾತ್ರ 102.93 ಕೋಟಿ ರೂ. ಗಡಿ ದಾಟಿತ್ತು. 1966-67ರಿಂದ 1971-72ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ರಾಮಕೃಷ್ಣ ಹೆಗಡೆ 1969-70ರಲ್ಲಿ ಆಯವ್ಯಯದ ಗಾತ್ರವನ್ನು 226.48 ಕೋಟಿ ರೂ. ಗೆ ಏರಿಸುವ ಮೂಲಕ ಮೊದಲ ಬಾರಿಗೆ ಬಜೆಟ್ ಗಾತ್ರವನ್ನು ದ್ವಿಶತಕಕ್ಕೆ ಕೊಂಡೊಯ್ದಿದ್ದರು.
1982ರಲ್ಲಿ ಸಾವಿರ ಕೋಟಿ ಗಡಿ ದಾಟಿದ ರಾಜ್ಯ ಬಜೆಟ್ : ವೀರಪ್ಪ ಮೊಯ್ಲಿ ಸಿಎಂ ಆಗಿದ್ದಾಗ 1982-83ರಲ್ಲಿ ಬಜೆಟ್ ಗಾತ್ರವನ್ನು 1,178.66 ಕೋಟಿ ರೂ.ಗೆ ಕೊಂಡೊಯ್ದರು. ಬಳಿಕ ಎಂ. ರಾಜಶೇಖರಮೂರ್ತಿಯವರು 1990-91ರಲ್ಲಿ 4,010.23 ಕೋಟಿ ರೂ. ಆಯವ್ಯಯ ಮಂಡಿಸಿದ್ದರು. 1992-93 ರಲ್ಲಿ ಎಸ್. ಬಂಗಾರಪ್ಪ 5,677 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು.
1995ರಲ್ಲಿ 10 ಸಾವಿರ ಕೋಟಿ ಗಡಿ ತಲುಪಿದ ಬಜೆಟ್ : ರಾಜ್ಯದ ಬಜೆಟ್ ಗಾತ್ರವನ್ನು 10,000 ಸಾವಿರ ಕೋಟಿ ರೂ. ಗಾತ್ರ ಹಿಗ್ಗಿಸಿದ ಹಿರಿಮೆ ಸಲ್ಲುವುದು ಸಿದ್ದರಾಮಯ್ಯ ಅವರಿಗೆ. ಅವರು 1995-96 ರಲ್ಲಿ10,859 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದರು. 2000-01ರಲ್ಲಿ ಎಸ್.ಎಂ. ಕೃಷ್ಣ ಅವರು 20,061 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. 2004-05 ರಲ್ಲಿ ಅವರು 30,285 ಕೋಟಿ ರೂ.ಗೆ ಬಜೆಟ್ ಗಾತ್ರವನ್ನು ಹಿಗ್ಗಿಸಿದ್ದರು. ರಾಜ್ಯದ ಬಜೆಟ್ ಗಾತ್ರವನ್ನು 50 ಸಾವಿರ ಕೋಟಿಯ ಗಡಿ ದಾಟಿಸಿದ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ. ಅವರು 2008-09ರಲ್ಲಿ ಮಂಡಿಸಿದ ಬಜೆಟ್ ಗಾತ್ರ 55,313 ಕೋಟಿ ರೂ.ಗೆ ತಲುಪಿತ್ತು.
2012ರಲ್ಲಿ ಲಕ್ಷ ಕೋಟಿಯ ಗಡಿ ದಾಟಿಸಿದ ಬಜೆಟ್ : ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಬಜೆಟ್ ಮೊದಲ ಬಾರಿಗೆ 1 ಲಕ್ಷ ಕೋಟಿ ರೂಪಾಯಿ ದಾಟಿತ್ತು. 2012-13ರಲ್ಲಿ ಡಿ.ವಿ. ಸದಾನಂದಗೌಡ 1.02 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಈ ಮೂಲಕ ಬಜೆಟ್‌ನ ಮೊತ್ತ ಲಕ್ಷ ಕೋಟಿ ರೂ. ದಾಟುವಂತಾಗಿತ್ತು. ಅಲ್ಲಿಂದೀಚೆಗೆ ಬಜೆಟ್ ಗಾತ್ರವನ್ನು ಲಕ್ಷ ಕೋಟಿಯಲ್ಲೇ ಲೆಕ್ಕಾಚಾರ ಮಾಡಲಾಗುತ್ತಿದೆ.ರಾಜ್ಯದ ಬಜೆಟ್‌ನ ಇತಿಹಾಸವನ್ನು ಅವಲೋಕಿಸಿದರೆ ಅಭಿವೃದ್ಧಿಯ ಪಥ ಹೇಗೆ ಸಾಗಿ ಬಂದಿದೆ ಎಂಬುದರ ಸ್ಥೂಲ ಚಿತ್ರಣ ದೊರಕುತ್ತದೆ.