ಮಹತ್ವದ ಸಭೆ : ಬೆಂಗಳೂರು ಬಿಜೆಪಿ ಶಾಸಕರೊಂದಿಗೆ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಸಂಘಟನಾತ್ಮಕ ಹೋರಾಟ ಹಾಗೂ ಬರ ಅಧ್ಯಯನ ಪ್ರವಾಸದ ರೂಪುರೇಷೆ ಸಿದ್ಧಪಡಿಸುವ ಕುರಿತು ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಸಲಾಯಿತು.ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಹಾಗೂ ಬರ ಅಧ್ಯಯನ ಪ್ರವಾಸದ ರೂಪುರೇಷೆ ಸಿದ್ಧಪಡಿಸಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದಂತೆಯೇ ಕಾರಿನ ಬಳಿಯೇ ಬಂದು ಬಿಜೆಪಿ ಶಾಸಕರು ಸ್ವಾಗತಿಸಿದರು. ಶಾಸಕ ಉದಯ್ ಗರುಡಾಚಾರ್ ಬಿಎಸ್​ವೈ ಕಾಲು ಮುಟ್ಟಿ ನಮಸ್ಕರಿಸಿದರು. ನಂತರ ಸುದೀರ್ಘ ಸಭೆ ನಡೆಸಲಾಯಿತು. ಬರ ಅಧ್ಯಯನ ಪ್ರವಾಸದ ಕುರಿತಾಗಿ ಸಮಾಲೋಚನೆ ನಡೆಯಿತು. ಇದೇ ವೇಳೆ ಸರ್ಕಾರದ ವೈಫಲ್ಯ, ಬರ ನಿರ್ವಹಣೆ ವೈಫಲ್ಯದ ವಿರುದ್ಧ ಹೋರಾಟ ನಡೆಸುವ ಕುರಿತು ಚರ್ಚಿಸಲಾಯಿತು.ಜಗನ್ನಾಥ ಭವನದಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಯಡಿಯೂರಪ್ಪ ಬೆಂಗಳೂರಿನ ಬಿಜೆಪಿ ಶಾಸಕರ ಸಭೆ ನಡೆಸಿದರು.

ಸಭೆಯಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ರಾಜ್ಯದ ಮಾಜಿ ಸಚಿವ ಕೆ.ಗೋಪಾಲಯ್ಯ, ಶಾಸಕರುಗಳಾದ ಎಸ್.ರಘು, ಎಸ್. ಮುನಿರಾಜು, ಎಸ್.ಆರ್.ವಿಶ್ವನಾಥ್, ಕೆ.ಸಿ. ರಾಮಮೂರ್ತಿ, ಎಂ. ಕೃಷ್ಣಪ್ಪ, ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಉಪಸ್ಥಿತರಿದ್ದರು.ಸಭೆಯಲ್ಲಿ ಅನುದಾನ ಬಗ್ಗೆ ಅಸಮಾಧಾನ ಹೊರಹಾಕಲಾಯಿತು. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಯಡಿಯೂರಪ್ಪನವರ ಎದುರು ಬಿಜೆಪಿ ಶಾಸಕರು ಬೇಸರ ತೋಡಿಕೊಂಡರು. ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಯಡಿಯೂರಪ್ಪಗೆ ಮನವಿ ಮಾಡಿದರು.