ಅರಣ್ಯ ಇಲಾಖೆಯ ಬೋನಿಗೆ ಬೀಳದ ಚಿರತೆ, ಬೆಂಗಳೂರಿನಲ್ಲಿ ಮುಂದುವರೆದ ಕಾರ್ಯಾಚರಣೆ

ಬೆಂಗಳೂರು: ಕಡೆಂಜಾ (Cadenza) ಅಪಾರ್ಟ್​ಮೆಂಟ್​ ಸಮೀಪ ಚಿರತೆ ಕಾಣಿಸಿಕೊಂಡಿದ್ದು ಸುತ್ತಮುತ್ತ ಹುಡುಕಾಟ ನಡೆಸಲಾಗಿತ್ತು. ಆದರೆ ಚಿರತೆ ತಪ್ಪಿಸಿಕೊಂಡು ಓಡಾಡುತ್ತಿದೆ.ನಗರದ ಹೊರವಲಯದಲ್ಲಿರುವ ಬೊಮ್ಮನಹಳ್ಳಿಯ ಸಿಂಗಸಂದ್ರ ಎಇಸಿಎಸ್ ಲೇಔಟ್‌ನಲ್ಲಿ ನಿನ್ನೆ (ಸೋಮವಾರ) ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಎರಡು ಬೋನುಗಳನ್ನಿಟ್ಟು ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಬೆಂಗಳೂರಿನ ಹೊರವಲಯದಲ್ಲಿ ಕಾಣಿಸಿಕೊಂಡ ಚಿರತೆ ಸೆರೆ ಹಿಡಿಯಲು ಮೈಸೂರಿನಿಂದ ವಿಶೇಷ ತಂಡ ಆಗಮಿಸಿದೆ.

ಮೈಸೂರಿನಿಂದ ವಿಶೇಷ ತಂಡ ಆಗಮನ: ಚಿರತೆ ಕಾರ್ಯಾಚರಣೆಗಾಗಿ ಮೈಸೂರಿನಿಂದ ವಿಶೇಷ ತಂಡ ಬೆಂಗಳೂರಿಗೆ ಆಗಮಿಸಿದೆ. ಈಗಾಗಲೇ ಹಲವೆಡೆ ಚಿರತೆ ಹಿಡಿದು ಪರಿಣತರಾಗಿರುವ ಸಿಬ್ಬಂದಿ ಈ ತಂಡದಲ್ಲಿದ್ದಾರೆ. ಸುರಕ್ಷತಾ ಜಾಕೆಟ್​ ಬಳಸಿ ತಂಡ ಅಖಾಡಕ್ಕಿಳಿದಿದೆ. ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್​ ಪ್ರದೇಶದಲ್ಲಿ ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ. “ಬೆಳಿಗ್ಗಿನ ಸಮಯದಲ್ಲಿ ಓಡಾಡಲು ಭಯವಾಗುತ್ತಿದೆ. ಜನರು ವಾಕ್​ ಬರುವುದನ್ನು ನಿಲ್ಲಿಸಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿ ಚಿರತೆ ಕಾಣಿಸಿಕೊಂಡ ದಿನದಿಂದ ಆತಂಕ ಶುರುವಾಗಿದೆ. ಆದಷ್ಟು ಬೇಗ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಬೇಕು” ಎಂದು ಸ್ಥಳೀಯ ನಿವಾಸಿ ಸೌಂದರ್​ ರಾಜ್​ ಮನವಿ ಮಾಡಿದರು.

ಅಕ್ಟೋಬರ್​ 29ರ ರಾತ್ರಿಯಿಂದ ಸಿಂಗಸಂದ್ರ, ಹೊಸಪಾಳ್ಯ, ಕೂಡ್ಲುಭಾಗದಲ್ಲಿ ಚಿರತೆ ಓಡಾಟ ಹೆಚ್ಚಾಗಿದೆ. ಪ್ರತಿಷ್ಠಿತ ಅಪಾರ್ಟ್​ಮೆಂಟ್​ಗಳ ಆವರಣ ಹಾಗೂ ಲೇಔಟ್​ಗಳಲ್ಲಿ ಸಂಚರಿಸಿದೆ. ಕತ್ತಲಾಗುತ್ತಿದ್ದಂತೆ ಅಪಾರ್ಟ್​ಮೆಂಟ್​ನ ಮೆಟ್ಟಿಲು, ಲಿಫ್ಟ್ ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ ಚಿರತೆ ಓಡಾಡಿದೆ. ದೊಣ್ಣೆ ಹಿಡಿದು ಓಡಾಡುತ್ತಿರುವ ಜನರು: ಅಕ್ಟೋಬರ್​​ 29ರ ರಾತ್ರಿ ಬೊಮ್ಮನಹಳ್ಳಿಯ ಕೂಡ್ಲು ಭಾಗದ ಜನವಸತಿ ಪ್ರದೇಶ ಸಮೀಪದ ಕಾರಿನ ಗ್ಯಾರೇಜ್​ನಲ್ಲಿಯೂ ಚಿರತೆ ಓಡಾಡಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ಭಯಕ್ಕೆ ಇಲ್ಲಿನ ಜನರು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ.

ಸ್ಥಳಕ್ಕೆ ಅರಣ್ಯಾಧಿಕಾರಿ ಪಿಸಿಸಿಎಫ್​ ಸುಭಾಷ್​ ಮಾಲ್ಕೆಡೆ, ಡಿಎಫ್​ಒ ರವೀಂದ್ರ ನೇತೃತ್ವದ ಅಧಿಕಾರಿಗಳ ತಂಡ ಭೇಟಿ​ ನೀಡಿದೆ. “ಜನರು ಸಾಕಷ್ಟು ಹುಷಾರಾಗಿರಬೇಕು. ಮೈಸೂರಿನಿಂದ ಟಾಸ್ಕ್​ ಫೋರ್ಸ್​ ಬಂದಿದೆ. ವೆಟರ್ನರಿ ಡಾಕ್ಟರ್​ ಟ್ರ್ಯಾಂಕುಲೈಸ್ ಮಾಡುತ್ತಾರೆ. ಚಿರತೆ ಈಗ ಸ್ಟ್ರೆಸ್​ನಲ್ಲಿರುತ್ತೆ. ಈ ಸಮಯದಲ್ಲಿ ಯಾರೂ ಇಲ್ಲಿರಬಾರದು. ಅಪಾರ್ಟ್​ಮೆಂಟ್​ ಬಳಿ ಎಚ್ಚರಿಕೆವಹಿಸಿ. ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಬೇಕು” ಎಂದು ಸುಭಾಷ್​ ಮಾಲ್ಕೆಡೆ ಹೇಳಿದ್ದಾರೆ.