ನ.1 ರಿಂದ ಮೂರು ದಿನಗಳ ಕಾಲ ರಾಜ್ಯಮಟ್ಟದ ಕ್ರೀಡಾಕೂಟ

ಉಡುಪಿ: ಜಿಲ್ಲಾಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸೇಂಟ್ ಸಿಸಿಲಿ ಶಾಲೆ ಸಹಯೋಗದಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ಉಡುಪಿಯ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಿದ್ದು, 35 ಶೈಕ್ಷಣಿಕ ಜಿಲ್ಲೆಗಳಿಂದ 14 ವರ್ಷದೊಳಗಿನ 1800 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಶಾಸಕ ಯಶಪಾಲ್ ಸುವರ್ಣ ತಿಳಿಸಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಅಂತರಾಷ್ಟ್ರೀಯ ಅಥ್ಲೀಟ್ ಮಿಜೋ ಚಾಕೋ ಕುರಿಯನ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾ ಪಟುಗಳಿಗೆ 17 ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. 4.30ಕ್ಕೆ ಕ್ರೀಡಾಕೂಟ ಉದ್ಘಾಟನೆಗೊಳ್ಳಲಿದ್ದು ಇದಕ್ಕೂ ಮುನ್ನ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‌ನಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.