ಬೆಂಗಳೂರು : ವಿದೇಶದಿಂದ ಅಕ್ರಮವಾಗಿ ಸಿಗರೇಟ್ ಸಾಗಿಸುವ ಯತ್ನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ. ಈ ವೇಳೆ ಪ್ರಯಾಣಿಕರು ಸಿಕ್ಕಿಬಿದ್ದಿದ್ದು, ಅವರಿಂದ ವಶಪಡಿಸಿಕೊಂಡು 1.46 ಕೋಟಿ ಮೌಲ್ಯದ 7.3 ಲಕ್ಷ ಸಿಗರೇಟ್ಗಳನ್ನು ಸುಟ್ಟು ನಾಶ ಮಾಡಲಾಗಿದೆ. ನೆಲಮಂಗಲದ ಬೆಂಗಳೂರು ಇಕೋ ಪ್ರೈವೇಟ್ ಲಿಮಿಟೆಡ್ನಲ್ಲಿರುವ ಇನ್ಸಿನರೇಟರ್ನಲ್ಲಿ ಜಪ್ತಿ ಮಾಡಲಾದ ಸಿಗರೇಟ್ಗಳನ್ನು ಇಡೀ ದಿನ ನಾಶಪಡಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 1.46 ಕೋಟಿ ಮೌಲ್ಯದ 7.3 ಲಕ್ಷ ಸಿಗರೇಟ್ಗಳನ್ನು ವಶಕ್ಕೆ ಪಡೆದುಕೊಂಡು ನಂತರ ನಾಶಗೊಳಿಸಿದ್ದಾರೆ.
ಅಕ್ಟೋಬರ್ 2 ರಿಂದ 31ರ ವರೆಗೆ ಕಸ್ಟಮ್ಸ್ ಇಲಾಖೆಯು ನಡೆಸುತ್ತಿರುವ ಸ್ವಚ್ಛತಾ ಅಭಿಯಾನದ ಅಂಗವಾಗಿ ಸಿಗರೇಟ್ ಗಳನ್ನು ನಾಶಪಡಿಸಲಾಯಿತು. ಸಿಗರೇಟ್ಗಳ ನಾಶಪಡಿಸುವ ವೇಳೆ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಏರ್ ಕಾರ್ಗೋ ಕಮಿಷನರೇಟ್ನ ಜಾಗೃತ ಘಟಕದ ಅಧಿಕಾರಿಗಳು ಉಪಸ್ಥಿತರಿದ್ದರು.ಪಶ್ಚಿಮ ಏಷ್ಯಾ ಮತ್ತು ಥಾಯ್ಲೆಂಡ್ನಿಂದ ಪ್ರಯಾಣಿಕರು ಬೆಂಗಳೂರಿಗೆ ಅಕ್ರಮವಾಗಿ ಸಿಗರೇಟ್ ಸಾಗಿಸುವ ಯತ್ನದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಿದ್ದರು. ಒಬ್ಬ ಪ್ರಯಾಣಿಕನಿಗೆ ವಿದೇಶದಿಂದ 100 ಸಿಗರೇಟ್ಗಳನ್ನು ತರಲು ಅನುಮತಿ ನೀಡಲಾಗಿದೆ. ಆದರೆ ಪ್ರಯಾಣಿಕರು 100ಕ್ಕಿಂತ ಹೆಚ್ಚು ಸಿಗರೇಟ್ಗಳನ್ನು ತಂದು ಕಸ್ಟಮ್ಸ್ ಆಕ್ಟ್ 1962ರ ಅಡಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ನಿಯಮಗಳನ್ನ ಮೀರಿ ಸಿಗರೇಟ್ಗಳನ್ನ ತರುವ ಪ್ರಯಾಣಿಕರಿಗೆ ಅನುಗುಣವಾಗಿ ದಂಡವನ್ನು ವಿಧಿಸಲಾಗುತ್ತದೆ. 50 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಸಿಗರೇಟ್ಗಳನ್ನ ತಂದವರನ್ನ ಬಂಧನಕ್ಕೆ ಒಳಪಡಿಸಲಾಗುತ್ತದೆ.
ಇತ್ತೀಚಿನ ಪ್ರಕರಣಗಳು- ಬೆಂಗಳೂರು ಕಸ್ಟಮ್ಸ್ಗೆ ಸಿಕ್ಕಿಬಿದ್ದ ಸ್ಮಗ್ಲರ್ಸ್ : ವಿದೇಶದಿಂದ ಅಕ್ರಮವಾಗಿ ಇ-ಸಿಗರೇಟ್ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಕಸ್ಟಮ್ಸ್ ಅಧಿಕಾರಿಗಳಿಗೆ (ಸೆಪ್ಟೆಂಬರ್ 18-2023) ಸಿಕ್ಕಿಬಿದ್ದಿದ್ದರು. ಆರೋಪಿಗಳಿಂದ 15.9 ಲಕ್ಷ ರೂಪಾಯಿ ಮೌಲ್ಯದ ಇ-ಸಿಗರೇಟ್ ವಶಕ್ಕೆ ಪಡೆಯಲಾಗಿತ್ತು.
ಸೂಟ್ಕೇಸ್ನಲ್ಲಿ 20 ವಿಷಕಾರಿ ಕಿಂಗ್ ಕೋಬ್ರಾ!: ಬ್ಯಾಂಕಾಕ್ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಲಗೇಜ್ಗಳನ್ನು ತಪಾಸಣೆ ಮಾಡಿದಾಗ ಆತನ ಸೂಟ್ ಕೇಸ್ನಲ್ಲಿ 20 ವಿಷಕಾರಿ ಕಿಂಗ್ ಕೋಬ್ರಾಗಳು ಪತ್ತೆಯಾಗಿದ್ದವು. ಹೆಬ್ಬಾವು, ಕೋತಿಗಳು ಸೇರಿದಂತೆ ಒಟ್ಟು 78 ಪ್ರಾಣಿಗಳಿದ್ದವು. ಸೆಪ್ಟೆಂಬರ್ 6 ರಂದು ರಾತ್ರಿ 10:30ಕ್ಕೆ ಏರ್ ಏಷ್ಯಾ ವಿಮಾನದಲ್ಲಿ ಬಂದ ಪ್ರಯಾಣಿಕನ ಲಗೇಜ್ಗಳನ್ನು ಪರಿಶೀಲನೆ ಮಾಡಿದಾಗ ಅಕ್ರಮ ಬಯಲಾಗಿತ್ತು.ಸೋಮವಾರ ಮಲೇಷ್ಯಾದ ಕೌಲಾಲಂಪುರ್ನಿಂದ ಮಲೇಷ್ಯಾ ಏರ್ಲೈನ್ಸ್ ಎಮ್ ಹೆಚ್ 192 ವಿಮಾನದ ಮೂಲಕ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಲಗೇಜ್ಗಳನ್ನು ಪರಿಶೀಲನೆ ಮಾಡುವಾಗ ಅಕ್ರಮ ಪತ್ತೆಯಾಗಿತ್ತು. 1,590 ಇ-ಸಿಗರೇಟ್ಗಳನ್ನು ಜಪ್ತಿ ಮಾಡಲಾಗಿತ್ತು. ಆರೋಪಿಗಳ ವಿರುದ್ಧ ಕಸ್ಟಮ್ಸ್ ಕಾಯ್ದೆ 1962 ಅಡಿ ಪ್ರಕರಣ ದಾಖಲಿಸಲಾಗಿತ್ತು.