ಕೆಯುಡಿ : ವಿವಿ ಘಟಿಕೋತ್ಸವ ಡಿ.ಕೆ.ಶಿವಕುಮಾರ್ ಹೆಸರಲ್ಲಿ ಚಿನ್ನದ ಪದಕ ಪ್ರದಾನ

ಧಾರವಾಡ: ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೆಸರಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ಪದಕ ನೀಡಲಾಯಿತು.ಕರ್ನಾಟಕ ವಿಶ್ವವಿದ್ಯಾಲಯದ 73ನೇ ಘಟಿಕೋತ್ಸವ ಸೋಮವಾರ ಇಲ್ಲಿನ ಗಾಂಧಿ ಭವನದಲ್ಲಿ ನಡೆಯಿತು. ಘಟಿಕೋತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೆಸರಿನಲ್ಲಿ ಒಂದು ಚಿನ್ನದ ಪದಕ ಪ್ರದಾನ ಮಾಡಲಾಯಿತು. ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಈ ವರ್ಷದಿಂದ ಚಿನ್ನದ ಪದಕ ದತ್ತಿ ಇಡಲಾಗಿದೆ.ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ 73ನೇ ಘಟಿಕೋತ್ಸವ ಇಂದು ನಡೆಯಿತು.

ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.‌ಸುಧಾಕರ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸಮಾಜ ಸೇವಕರಾದ ರವಿಶಂಕರ ಭೋಪಾಳಪುರ, ಅರ್ಚನಾ ಸುರಾನಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.ಕವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ದಾದಾಗೌಡ ಪಾಟೀಲ್​ ಅವರಿಗೆ ಈ ಪದಕ ಲಭಿಸಿತು. ದಾದಾಗೌಡ ಪಾಟೀಲ್​ 9 ಪದಕ ಪಡೆದರು. ವಿವಿ ಕನ್ನಡ ವಿಭಾಗದ ವಿದ್ಯಾರ್ಥಿ ನೇಹಾ ಹೆಚ್ಚು ಗೋಲ್ಡ್ ಮೆಡಲ್ ಪಡೆದ ಪ್ರತಿಭೆಯಾಗಿ ಹೊರಹೊಮ್ಮಿದರು. ಶಿಕ್ಷಕರ ಮಗಳಾದ ನೇಹಾ, ಬೆಳಗಾವಿ ಗಡಿ ಭಾಗದ ಹಳ್ಳಿಯವರು. “ನಮ್ಮ ಭಾಗದಲ್ಲಿ ಕನ್ನಡ ಉಳಿಸಬೇಕಾಗಿದೆ. ನಾನು ಕನ್ನಡದಲ್ಲಿಯೇ ಕೆಎಎಸ್ ಮಾಡುತ್ತೇನೆ” ಎಂದು ಅವರು ಹೇಳಿದರು.

ಚಿನ್ನದ ಪದಕ ಪಡೆದ ವಿದ್ಯಾರ್ಥಿ ದಾದಾಗೌಡ ಪಾಟೀಲ್ ಮಾತನಾಡಿ, “ನನ್ನ ಜವಬ್ದಾರಿ ಹೆಚ್ಚಿದೆ. ನನಗೆ 9 ಗೋಲ್ಡ್​ ಮೆಡಲ್​ ಬಂದಿದೆ. ಸಮೂಹ ಸಂವಹನ ಮತ್ತು ಪ್ರತ್ಯಿಕೋದ್ಯಮದಲ್ಲಿ ಸ್ನಾತಕ್ಕೋತ್ತರ ಪದವಿ ಪೂರ್ಣಗೊಳಿಸಿದ್ದೇನೆ. ತುಂಬಾ ಸಂತಸವಾಗುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್​ ಹೆಸರಿನಲ್ಲಿ ನಮ್ಮ ವಿಭಾಗದಲ್ಲಿ ಇದೇ ಮೊದಲ ಬಾರಿ ಚಿನ್ನದ ಪದಕ ದತ್ತಿ ಇಟ್ಟಿದ್ದಾರೆ. ಅದು ನನಗೇ ದೊರಕಿದ್ದು ಇನ್ನೂ ಸಂತೋಷವಾಯಿತು. ಮನೆ, ಕಾಲೇಜು, ನನ್ನ ಸ್ನೇಹಿತರು ತುಂಬಾ ಪ್ರೋತ್ಸಾಹ ನೀಡಿದ್ದಾರೆ” ಎಂದರು.

ಪಿಎಚ್‌ಡಿ ಪದವೀಧರರ ಅಸಮಾಧಾನ: ಕಾರ್ಯಕ್ರಮದಲ್ಲಿ ಎಲ್ಲರಿಗೂ ಚಿನ್ನದ ಪದಕ ನೀಡಿದ ಬಳಿಕ, ರಾಜ್ಯಪಾಲರ ಭಾಷಣವಾಯಿತು. ಆಗ ಘಟಿಕೋತ್ಸವ ಮುಗಿಸಬೇಕಿತ್ತು. ಆದರೆ 263 ಪಿಎಚ್‌ಡಿ ಪದವೀಧರರಿಗೆ ಪ್ರಮಾಣ ಪತ್ರ ನೀಡಿರಲಿಲ್ಲ‌. ಮಧ್ಯಾಹ್ನದ ಬಳಿಕ ಪ್ರತ್ಯೇಕವಾಗಿ ನೀಡುತ್ತೇವೆ ಎಂದು ಕವಿವಿ ಹೇಳಿತ್ತು. ಆದರೆ ನಮಗೂ ರಾಜ್ಯಪಾಲರಿಂದಲೇ ಪ್ರಶಸ್ತಿ ಕೊಡಿಸಿ ಎಂದು ಪಿಎಚ್‌ಡಿ ಪದವೀಧರರು ಪಟ್ಟು ಹಿಡಿದು ಸಾತ್ವಿಕ ಹೋರಾಟ ಮಾಡಿದರು.‌ ಕೊನೆಗೆ, ಪ್ರಮಾಣ ಪತ್ರ ನೀಡಲು ರಾಜ್ಯಪಾಲರು ಒಪ್ಪಿದ ಬಳಿಕ ಶಿಷ್ಟಾಚಾರ ಮುರಿದು ಎಲ್ಲರಿಗೂ ರಾಜ್ಯಪಾಲರೇ ಪ್ರಮಾಣ ಪತ್ರ ವಿತರಿಸಿದರು.