ಕರಡು ವರದಿಗೆ ಸಂಸದೀಯ ಸ್ಥಾಯಿ ಸಮಿತಿ ತಡೆ: ಹೊಸ ಕ್ರಿಮಿನಲ್​ ಕಾನೂನು ಮಸೂದೆ

ನವದೆಹಲಿ: ದೇಶದಲ್ಲಿ ಅಸ್ತಿತ್ವದಲ್ಲಿರುವ ಐಪಿಸಿ​, ಸಿಆರ್​ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ ಸೇರಿ ಕ್ರಿಮಿನಲ್​ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳ ಕರಡು ವರದಿಯನ್ನು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು  ಶುಕ್ರವಾರ ತಡೆಹಿಡಿದಿದೆ. ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಮತ್ತು ಭಾರತೀಯ ಸಾಕ್ಷ್ಯ-2023 ಮಸೂದೆಗಳ ಕರಡು ವರದಿಯನ್ನು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ತಡೆಹಿಡಿದಿದೆ.

ಈ ಮೂರು ಮಸೂದೆಗಳ ಕರಡು ವರದಿಗಳನ್ನು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ವಹಿಸಲಾಗಿದೆ. ಇಂದು ಸಂಸತ್ ಭವನದ ಅನೆಕ್ಸ್‌ನ ಸಮಿತಿ ಕೊಠಡಿಯಲ್ಲಿ ಬಿಜೆಪಿ ಸಂಸದ ಬ್ರಿಜ್ ಲಾಲ್ ನೇತೃತ್ವದಲ್ಲಿ ಸಮಿತಿ ಸಭೆ ಸೇರಿತು. ಈ ವೇಳೆ, ಲೋಕಸಭೆಯಲ್ಲಿ ಕಾಂಗ್ರೆಸ್​ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಪಿ.ಚಿದಂಬರಂ, ಟಿಎಂಸಿ ಸದಸ್ಯ ಡೆರೆಕ್ ಒಬ್ರಿಯಾನ್ ಮತ್ತು ಡಿಎಂಕೆ ಸಂಸದ ಎನ್‌.ಆರ್.ಇಲಾಂಗೋ ಹಾಗೂ ಇತರ ಪ್ರತಿಪಕ್ಷದ ಸದಸ್ಯರು ಕರಡುಗಳನ್ನು ಪರಿಶೀಲಿಸಲು ಸ್ವಲ್ಪ ಸಮಯ ಕೋರಿದರು. ಇದರಿಂದ ಕರಡು ವರದಿಗೆ ಸಮಿತಿ ತಡೆ ನೀಡಿತು.

ಶೀಘ್ರವೇ ಮಸೂದೆಗಳ ಅಂಗೀಕಾರ-ಅಮಿತ್​ ಶಾ: ಮತ್ತೊಂದೆಡೆ, ಗೃಹ ಸಚಿವ ಅಮಿತ್​ ಶಾ ಈ ಮೂರು ಮಸೂದೆಗಳು ಕುರಿತು ಮಾತನಾಡಿ, ಇವುಗಳು ಶೀಘ್ರವೇ ಜಾರಿ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ಪ್ರೊಬೇಷನರ್‌ಗಳ ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಆರ್‌ಪಿಸಿ, ಐಪಿಸಿ ಮತ್ತು ಸಾಕ್ಷ್ಯ ಕಾಯ್ದೆ ಬದಲಿಗೆ ಮೂರು ಹೊಸ ಕ್ರಿಮಿನಲ್​ ಕಾನೂನು ಕರಡುಗಳನ್ನು ಜಾರಿಗೆ ತರುವ ಬಗ್ಗೆ ಒತ್ತಿ ಹೇಳಿದರು.

”ಸರ್ಕಾರವು ಈ ಮೂರು ಕಾನೂನುಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಸಂಸತ್ತಿನಲ್ಲಿ ಮೂರು ಹೊಸ ಮಸೂದೆಗಳನ್ನು ಪರಿಚಯಿಸಿದೆ. ಗೃಹ ಸಚಿವಾಲಯದ ಸಂಸತ್ತಿನ ಸಮಿತಿಯು ಇವುಗಳನ್ನು ನ್ನು ಪರಿಶೀಲಿಸುತ್ತಿದೆ. ಸ್ವಲ್ಪ ಸಮಯದ ನಂತರ ಈ ಕಾನೂನುಗಳು ಅಂಗೀಕರಿಸಲ್ಪಡುತ್ತವೆ. ಈ ಕಾನೂನುಗಳ ಆಧಾರದ ಮೇಲೆಯೇ ನಮ್ಮ ದೇಶದ ಹೊಸ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ನಡೆಯಲಿದೆ” ಎಂದು ತಿಳಿಸಿದರು.

ಭಾರತೀಯ ದಂಡ ಸಂಹಿತೆ (ಐಪಿಸಿ)-1860, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್​ಪಿಸಿ)-1973, ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ- 1872 ಅನ್ನು ಬದಲಿಸಿ, ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಮತ್ತು ಭಾರತೀಯ ಸಾಕ್ಷ್ಯ-2023 ಮಸೂದೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಆಗಸ್ಟ್ 11ರಂದು ಈ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಪರಿಚಯಿಸಿದ್ದರು.ಅಲ್ಲದೇ, ಸಂಸದರು ವಿಧೇಯಕಗಳ ಹೆಸರಿನ ವಿಷಯದ ಬಗ್ಗೆ ಪ್ರಸ್ತಾಪಿಸಿದರು. ನ.6ರಂದು ಸಮಿತಿಯ ಮುಂದಿನ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.