ಅವಿಭಜಿತ ದ.ಕ ಜಿಲ್ಲೆಯ ಅನಭಿಷಿಕ್ತ ದೊರೆಗಳಾಗಿ ಮೆರೆದ ಜನನಿ, ಜನ್ಮ ಭೂಮಿ ಮತ್ತು ಕರ್ಮಭೂಮಿಗೆ ಕೀರ್ತಿ ತಂದ ಬಾವ, ಗುತ್ತು, ಬರ್ಕೆ, ಬೂಡಿನ ಗತ್ತು ಗೈರತ್ತಿನ ಕ್ಷಾತ್ರ ತೇಜದ ವೈಶ್ಯ ವರ್ಣದ ಸಮುದಾಯ ಬಂಟ ಯಾನೆ ನಾಡವರದ್ದು. ಬಂಟ ಅಂದರೆ ಸಚಿವ- ಮಂತ್ರಿ- ಭಟ ಎಂಬುದಾಗಿಯೂ, ಅರಸೊತ್ತಿಗೆಯ ಕಾಲದಲ್ಲಿ ಆಳುಪ ಅರಸರಾಗಿ, ಸಾಮಂತಿಕೆಯ ಕಾಲದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದವರು. ಛಲ, ಬುದ್ದಿ ಬಲ- ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಇನ್ನೊಂದು ಹೆಸರಿದ್ದರೆ ಅದು ಬಂಟರದ್ದು. ಆಡು ಮುಟ್ಟದ ಸೊಪ್ಪಿಲ್ಲ, ಬಂಟರು ಕೈಯಾಡಿಸದ ಕ್ಷೇತ್ರವಿಲ್ಲ. ವಿವಿಧ ವೃತ್ತಿಯಲ್ಲಿ ಹರಿದು ಹಂಚಿ ಹೋಗಿದ್ದ ಸರಿಸುಮಾರು ನೂರು ಬಂಟ ಜಾತಿಗಳನ್ನು ಒಟ್ಟು ಸೇರಿಸಿ ‘ಮಾತೃಪ್ರಧಾನ ಸೋದರಳಿಯಕಟ್ಟು’ ಸಂತಾನದ ಸರ್ವರೂ ‘ಮಾತೃ ಸಂಘದ’ ಛತ್ರಛಾಯೆಯಲ್ಲಿದ್ದುಕೊಂಡು ಒಬ್ಬರನ್ನೊಬ್ಬರು ಆಧರಿಸಿಕೊಂಡು ಸಮುದಾಯವನ್ನು ಮೇಲೆತ್ತಿಕೊಂಡು ಸಮಾಜ ಮತ್ತು ದೇಶಕಟ್ಟಬೇಕೆನ್ನುವ ಉದ್ದೇಶದಿಂದ ಹಿರಿಯರು ನೆಟ್ಟ ಗಿಡವೇ “ಬಂಟರ ಯಾನೆ ನಾಡವರ ಮಾತೃ ಸಂಘ”
20 ನೇ ಶತಮಾನದ ಆರಂಭದಲ್ಲಿ, ದೂರದರ್ಶೀ ನಾಯಕತ್ವ ಹೊಂದಿದ ಹಿರಿಯರು ನೆಟ್ಟ ಪುಟ್ಟ ಗಿಡವಿಂದು ಬೃಹತ್ ಮರವಾಗಿ ಈ ಮರದ ಛತ್ರಛಾಯೆಯಡಿ ವಿಶ್ವದಾದ್ಯಂತ ಹರಿದು ಹಂಚಿ ಹೋಗಿರುವ ಬಂಟರು ತಂಬೆಲರು ಮತ್ತು ಆಶ್ರಯ ಪಡೆದಿದ್ದಾರೆ. ವಿಶ್ವವೇ ಒಂದು ಕುಟುಂಬ ಎನ್ನುವ ವೇದ ವಾಕ್ಯಕ್ಕೆ ಅನುಗುಣವಾಗಿ ವಿಶ್ವದಲ್ಲಿರುವ ಬಂಟ ಕುಟುಂಬಗಳನ್ನು ಜೊತೆ ಸೇರಿಸುವ ಜೊತೆಗೆ ಸಮಾಜದ ಇತರ ಸಮುದಾಯಗಳನ್ನೂ ತಮ್ಮ ಜೊತೆ ಸೇರಿಸಿ ಜೊತೆಯಾಗಿ ನಡೆಯುವ ಘನ ಉದ್ದೇಶವನ್ನು ‘ವಿಶ್ವ ಬಂಟರ ಸಮ್ಮೇಳನ-2023’ವು ಹೊಂದಿದೆ.
ರಾಜ್ಯದ 3 ಬಿ ಪಟ್ಟಿಯಲ್ಲಿ ಬಂಟರಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದ್ದು ಈ ಬಗ್ಗೆ ಬಂಟ ಸಮುದಾಯದ ಯುವ ಪೀಳಿಗೆಗೆ ಅರಿವು ಮೂಡಿಸುವುದು, ಸರಕಾರಿ ಉದ್ಯೋಗಗಳು ಮತ್ತು ಐ.ಎ.ಎಸ್, ಕೆ.ಎ.ಎಸ್, ಐ.ಪಿ.ಎಸ್ ಪರೀಕ್ಷೆಗಳಿಗಾಗಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು, ಪರವೂರ ಬಂಟರು ಹುಟ್ಟೂರಿನಲ್ಲಿ ಉದ್ಯಮಗಳನ್ನು ತೆರೆಯುವುದು, ಆರ್ಥಿಕವಾಗಿ ಹಿಂದುಳಿದ ಬಂಟರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಉದ್ಯೋಗಾವಕಾಶಗಳ ಸೃಜನೆ ಮುಂತಾದವುಗಳ ಜೊತೆ ಸಮುದಾಯವನ್ನು 2 ಎ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ವಿಚಾರ ಮಂಥನ ಮುಂತಾದ ಧ್ಯೇಯೋದ್ದಾತ ಯೋಜನೆಗಳನ್ನು ‘ವಿಶ್ವ ಬಂಟರ ಸಮ್ಮೇಳನ-2023’ ಹೊಂದಿದೆ.
ಜೊತೆಗೆ ಜಾತಿ ಮತ ಎಂಬ ಬೇಧ ಭಾವವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಮಹತ್ ಕಾರ್ಯ ನಡೆಯಲಿದೆ. ವಿವಿಧ ಕ್ಷೇತ್ರಗಳ ಪ್ರತಿಭಾನ್ವಿತರು, ಗಣ್ಯರು ಭಾಗವಹಿಸಲಿದ್ದು, ಕ್ರೀಡೆ ಮತ್ತು ಸಾಂಸ್ಕೃತಿಕ ಮೆರುಗಿನಿಂದ ತುಂಬಿದೆ.
ಗತಕಾಲದ ಆಗುಹೋಗುಗಳ ನಡುವೆ ವರ್ತಮಾನ ಮತ್ತು ಭವಿಷ್ಯತ್ ಕಾಲಗಳಿಗೆ ರೂಪುರೇಷೆ ಹಾಗೂ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಸಮುದಾಯದ ಒಗ್ಗಟ್ಟನ್ನು ಕಾಪಿಡುವ ನಿಟ್ಟಿನಲ್ಲಿ ಸರ್ವರ ಸಹಕಾರ ಮತ್ತು ಸಹಭಾಗಿತ್ವದ ನೆಲೆಯಲ್ಲಿ ವಿಶ್ವ ಬಂಟರ ಸಮ್ಮೇಳನವನ್ನು ಆಯೋಜಿಸಿದ್ದು ಸಮಾಜದ ಸರ್ವರೂ ಇದರಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ದುಡಿಯಲಿ. ಸಮುದಾಯದಿಂದ ಸಮಾಜದ ಪ್ರಗತಿ ಮತ್ತು ಸಮಾಜದ ಪ್ರಗತಿಯಿಂದ ರಾಷ್ಟ್ರೋನ್ನತಿಯತ್ತ ಹೆಜ್ಜೆ ಹಾಕುವ ಸಂಕಲ್ಪದೊಂದಿಗೆ ಆಯೋಜಿಸಲ್ಪಡುತ್ತಿರುವ ವಿಶ್ವ ಬಂಟರ ಸಮ್ಮೇಳನವು ಅದ್ಭುತ ಯಶಸ್ಸನ್ನು ಕಾಣಲಿ ಎನ್ನುವುದು ಸಮಾಜದ ಸರ್ವ ಬಾಂಧವರ ಹಾರೈಕೆ.
ವಿಶೇಷ ಬರಹ: ಶರೋನ್ ಶೆಟ್ಟಿ ಐಕಳ©