ನವದೆಹಲಿ: ಆಮದು ಮಾಡಿಕೊಳ್ಳಲಾದ ಆರು ಒಣ ಇಂಧನ ಆಧರಿತ ಸ್ಥಾವರಗಳು ಸೇರಿದಂತೆ ದೇಶದ 86 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು ಅಕ್ಟೋಬರ್ 18ರ ವೇಳೆಗೆ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ) ವರದಿ ತಿಳಿಸಿದೆ.ಈ ಸ್ಥಾವರಗಳಲ್ಲಿ ಇರಬೇಕಾಗಿದ್ದ ಸಾಮಾನ್ಯ ಮಟ್ಟಕ್ಕಿಂತ ಶೇ 25 ರಷ್ಟು ಮಾತ್ರ ಕಲ್ಲಿದ್ದಲು ದಾಸ್ತಾನು ಇದ್ದು, ಇವುಗಳನ್ನು ಕನಿಷ್ಠ ಇಂಧನ ದಾಸ್ತಾನು ಹೊಂದಿರುವ ಸ್ಥಾವರಗಳ ಪಟ್ಟಿಗೆ ಸೇರಿಸಲಾಗಿದೆ.ದೇಶದ ಹಲವಾರು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು ಸಾಮಾನ್ಯಕ್ಕಿಂತ ಕಡಿಮೆ ಇದೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ ಹೇಳಿದೆ.
ವರದಿಯ ಪ್ರಕಾರ, ಒಟ್ಟು 149 ಗಿಗಾವ್ಯಾಟ್ ಸಾಮರ್ಥ್ಯದ 148 ಪಿಟ್ಹೆಡ್ ಅಲ್ಲದ ದೇಶೀಯ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಪ್ರಮಾಣಕ (ಅಥವಾ ಆದರ್ಶ) ಮಟ್ಟಕ್ಕಿಂತ ಶೇಕಡಾ 29 ರಷ್ಟು ಕಡಿಮೆ ಕಲ್ಲಿದ್ದಲು ಸಂಗ್ರಹವನ್ನು ಹೊಂದಿವೆ. ಈ 148 ಸ್ಥಾವರಗಳಲ್ಲಿ 2023 ರ ಅಕ್ಟೋಬರ್ 18 ರ ವೇಳೆಗೆ 43.53 ಮಿಲಿಯನ್ ಟನ್ ಕಲ್ಲಿದ್ದಲಿನ ಪ್ರಮಾಣಕ ಮಟ್ಟಕ್ಕೆ ಬದಲಾಗಿ ಸುಮಾರು 12.77 ಮಿಲಿಯನ್ ಟನ್ ಕಲ್ಲಿದ್ದಲು ಮಾತ್ರ ದಾಸ್ತಾನಿದೆ. ಆದಾಗ್ಯೂ, 18 ದೇಶೀಯ ಕಲ್ಲಿದ್ದಲು ಆಧರಿತ ಸ್ಥಾವರಗಳಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ಇವುಗಳು ಪ್ರಮಾಣಕ ಮಟ್ಟದ ಶೇಕಡಾ 81 ರಷ್ಟು ದಾಸ್ತಾನು ಹೊಂದಿವೆ. ಈ 18 ಸ್ಥಾವರಗಳು ಒಟ್ಟು 40 ಗಿಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ.
ಅಕ್ಟೋಬರ್ 18, 2023ರ ಸಿಇಎಯ ದೈನಂದಿನ ಕಲ್ಲಿದ್ದಲು ವರದಿಯ ಪ್ರಕಾರ, ದೇಶದಲ್ಲಿ ಮೇಲ್ವಿಚಾರಣೆ ಮಾಡಲಾದ 181 ರಲ್ಲಿ 86 ಉಷ್ಣ ವಿದ್ಯುತ್ ಸ್ಥಾವರಗಳು ಕನಿಷ್ಠ ಕಲ್ಲಿದ್ದಲು ದಾಸ್ತಾನು ಹೊಂದಿವೆ. ಈ 86 ಸ್ಥಾವರಗಳ ಪೈಕಿ ಆರು ಆಮದು ಸ್ಥಾವರಗಳಿವೆ. ಸಿಇಎ ದೇಶದ 181 ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಇವು ಒಟ್ಟು 206 ಗಿಗಾವ್ಯಾಟ್ ಸ್ಥಾಪಿತ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.
ಒಟ್ಟು 206 ಗಿಗಾವ್ಯಾಟ್ ಸಾಮರ್ಥ್ಯದ ಈ 181 ವಿದ್ಯುತ್ ಸ್ಥಾವರಗಳು 20.43 ಮಿಲಿಯನ್ ಟನ್ (ಆದರ್ಶ ಮಟ್ಟದ 38 ಪ್ರತಿಶತ) ಕಲ್ಲಿದ್ದಲು ಸಂಗ್ರಹ ಹೊಂದಿವೆ ಎಂದು ವರದಿ ತೋರಿಸಿದೆ. ಈ 181 ಸ್ಥಾವರಗಳಿಗೆ ದೈನಂದಿನ 2.8 ಮಿಲಿಯನ್ ಟನ್ ಇಂಧನ ಅಗತ್ಯವಾಗಿದೆ. ಅದರಂತೆ ಅಕ್ಟೋಬರ್ 18, 2023 ರ ಹೊತ್ತಿಗೆ ಏಳು ದಿನಗಳಿಗಿಂತ ಸ್ವಲ್ಪ ಹೆಚ್ಚು ಕಾಲ ಬಳಕೆಗೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇವುಗಳ ಬಳಿ ಇದೆ.
ಕಲ್ಲಿದ್ದಲು ಗಣಿಗಳ ಬಳಿಯೇ ಬಹುತೇಕ ಪಿಟ್ಹೆಡ್ ವಿದ್ಯುತ್ ಸ್ಥಾವರಗಳಿರುವುದರಿಂದ ಇಂಧನ ದಾಸ್ತಾನು ಕನಿಷ್ಠ ಮಟ್ಟದಲ್ಲಿದ್ದರೂ ಅದರಿಂದ ಅಂಥ ಸಮಸ್ಯೆಯಾಗದು ಎನ್ನುತ್ತಾರೆ ತಜ್ಞರು. ಗಣಿಗಳ ಬಳಿಯೇ ಇರುವ ಸ್ಥಾವರಗಳನ್ನು ಪಿಟ್ಹೆಡ್ ಎಂದು ಮತ್ತು ದೂರದಿಂದ ಕಲ್ಲಿದ್ದಲು ತರಿಸಿಕೊಳ್ಳುವ ಸ್ಥಾವರಗಳನ್ನು ನಾನ್-ಪಿಟ್ ಹೆಡ್ ಸ್ಥಾವರಗಳೆಂದು ಕರೆಯಲಾಗುತ್ತದೆ.