ಭಾರತದೊಂದಿಗಿನ ಗಡಿಯಲ್ಲಿ ಮೂಲಸೌಕರ್ಯ ಹೆಚ್ಚಿಸಿಕೊಂಡ ಚೀನಾ ಎಂದು ತಿಳಿಸಿದ ಪೆಂಟಗನ್ ವರದಿ

ವಾಶಿಂಗ್ಟನ್: ಭಾರತದೊಂದಿಗಿನ ಗಡಿ ಉದ್ವಿಗ್ನತೆಯ ಮಧ್ಯೆ ಚೀನಾ 2022ರಲ್ಲಿ ಡೋಕ್ಲಾಮ್ ಬಳಿ ಭೂಗತ ಸಂಗ್ರಹಣಾ ಸೌಲಭ್ಯಗಳನ್ನು ಹೆಚ್ಚಿಸಿದ್ದು, ಪಾಂಗೊಂಗ್ ಸರೋವರದ ಮೇಲೆ ಎರಡನೇ ಸೇತುವೆ ಮತ್ತು ಬಹುಪಯೋಗಿ ವಿಮಾನ ನಿಲ್ದಾಣ ಮತ್ತು ಅನೇಕ ಹೆಲಿಪ್ಯಾಡ್​ಗಳನ್ನು ನಿರ್ಮಾಣ ಮಾಡಿದೆ ಎಂದು ಪೆಂಟಗನ್ ವರದಿ ತಿಳಿಸಿದೆ. ಗಡಿಯಲ್ಲಿ ಚೀನಾ ಪಡೆಗಳ ನಿಯೋಜನೆಯನ್ನು ಹೆಚ್ಚಿಸಿದ್ದು ಮೂಲಸೌಕರ್ಯ ನಿರ್ಮಾಣವನ್ನು ಮುಂದುವರೆಸಿದೆ ಎಂದು ವರದಿ ಹೇಳಿದೆ. 2022ರಲ್ಲಿ ಚೀನಾ ಎಲ್​ಎಸಿ ಉದ್ದಕ್ಕೂ ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳನ್ನು ಹೆಚ್ಚಿಸಿದೆ ಎಂದು ಪೆಂಟಗನ್ ವರದಿ ಹೇಳಿದೆ

“ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಗಡಿ ಗುರುತಿಸುವಿಕೆಗೆ ಸಂಬಂಧಿಸಿದಂತೆ ಭಾರತ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್​ಸಿ) ನಡುವಿನ ವಿಭಿನ್ನ ಗ್ರಹಿಕೆಗಳು ಮತ್ತು ಎರಡೂ ಕಡೆಗಳಿಂದ ಇತ್ತೀಚಿನ ಮೂಲಸೌಕರ್ಯ ನಿರ್ಮಾಣದ ಕಾರಣದಿಂದ ಎರಡೂ ದೇಶಗಳ ಮಧ್ಯೆ ಸಂಘರ್ಷಕ್ಕೆ ಸಂಭವಿಸುತ್ತಿವೆ” ಎಂದು ವರದಿ ತಿಳಿಸಿದೆ. ವ್ಯಾಪಕ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ನಂತರ ಉಭಯ ದೇಶಗಳು ಹಲವಾರು ಪ್ರದೇಶಗಳಿಂದ ಹಿಂದೆ ಸರಿದಿದ್ದರೂ ಪೂರ್ವ ಲಡಾಖ್​ನ ಕೆಲ ಸಂಘರ್ಷದ ಸ್ಥಳಗಳಲ್ಲಿ ಭಾರತ ಮತ್ತು ಚೀನಾದ ಪಡೆಗಳು ಕಳೆದ ಮೂರು ವರ್ಷಗಳಿಂದ ಮುಖಾಮುಖಿಯಾಗಿ ನಿಂತಿವೆ. ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಒಳಗೊಂಡ ಮಿಲಿಟರಿ ಮತ್ತು ಭದ್ರತಾ ಬೆಳವಣಿಗೆಗಳು’ ವರದಿ 2023 ರ ಪ್ರಕಾರ: “ಮೇ 2020 ರ ಆರಂಭದಿಂದ, ಭಾರತ-ಚೀನಾ ಗಡಿಯುದ್ದಕ್ಕೂ ನಿರಂತರ ಉದ್ವಿಗ್ನತೆಗಳ ಬಗ್ಗೆ ವೆಸ್ಟರ್ನ್ ಥಿಯೇಟರ್ ಕಮಾಂಡ್​ ತನ್ನ ಗಮನವನ್ನು ಕೇಂದ್ರೀಕರಿಸಿದೆ.”
.
ಗಾಲ್ವಾನ್ ಕಣಿವೆಯಲ್ಲಿ 2020 ರ ಜೂನ್​ನಲ್ಲಿ ಪಿಆರ್​ಸಿ ಮತ್ತು ಭಾರತೀಯ ಯೋಧರ ನಡುವಿನ ಘರ್ಷಣೆಗೆ ಪ್ರತಿಕ್ರಿಯೆಯಾಗಿ, ವೆಸ್ಟರ್ನ್ ಥಿಯೇಟರ್ ಕಮಾಂಡ್ ಎಲ್‌ಎಸಿ ಉದ್ದಕ್ಕೂ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪಡೆಗಳನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಿತ್ತು ಎಂದು ವರದಿ ತಿಳಿಸಿದೆ. ಜೂನ್ 15, 2020 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಗಳು ದ್ವಿಪಕ್ಷೀಯ ಸಂಬಂಧಗಳನ್ನು ಗಮನಾರ್ಹವಾಗಿ ಹದಗೆಡಿಸಿದ್ದವು. 2022ರಲ್ಲಿ ಚೀನಾ ಎಲ್‌ಎಸಿ ಉದ್ದಕ್ಕೂ ಮಿಲಿಟರಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಿದೆ ಎಂದು ವರದಿ ತಿಳಿಸಿದೆ. ಡೋಕ್ಲಾಮ್ ಬಳಿ ಭೂಗತ ಶೇಖರಣಾ ಸೌಲಭ್ಯಗಳು, ಎಲ್‌ಎಸಿಯ ಎಲ್ಲಾ ಮೂರು ವಲಯಗಳಲ್ಲಿ ಹೊಸ ರಸ್ತೆಗಳು, ನೆರೆಯ ಭೂತಾನ್​ನ ವಿವಾದಿತ ಪ್ರದೇಶಗಳಲ್ಲಿ ಹೊಸ ಗ್ರಾಮಗಳು, ಪಾಂಗೊಂಗ್ ಸರೋವರದ ಮೇಲೆ ಎರಡನೇ ಸೇತುವೆ, ಕೇಂದ್ರ ವಲಯದ ಬಳಿ ಬಹುಪಯೋಗಿ ವಿಮಾನ ನಿಲ್ದಾಣ ಮತ್ತು ಅನೇಕ ಹೆಲಿಪ್ಯಾಡ್​ಗಳು ಈ ಸುಧಾರಣೆಗಳಲ್ಲಿ ಸೇರಿವೆ. ಕ್ಸಿನ್​ಜಿಯಾಂಗ್ ಮತ್ತು ಟಿಬೆಟ್ ಮಿಲಿಟರಿ ಜಿಲ್ಲೆಗಳ ಎರಡು ವಿಭಾಗಗಳ ಬೆಂಬಲದೊಂದಿಗೆ ನಾಲ್ಕು ಸಂಯೋಜಿತ ಶಸ್ತ್ರಾಸ್ತ್ರ ಬ್ರಿಗೇಡ್​ (ಸಿಎಬಿ) ಮತ್ತು ಒಂದು ಗಡಿ ರೆಜಿಮೆಂಟ್ ಅನ್ನು ಚೀನಾ 2022 ರಲ್ಲಿ ಎಲ್‌ಎಸಿಯ ಪಶ್ಚಿಮ ವಲಯದಲ್ಲಿ ಕಾಯ್ದಿರಿಸಿದೆ