ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸನ್ನಿವೇಶ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಎರಡು ರಾಜ್ಯಗಳ ನಡುವೆ ಮಾತುಕತೆ ನಡೆಸಬೇಕು ಎಂದು ನಟ ಡಾ.ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ. ಕಷ್ಟಕಾಲದ ಪರಿಸ್ಥಿತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ಮಾತುಕತೆಗೆ ಮುಂದಾಗಬೇಕು. ಎರಡೂ ಸರ್ಕಾರಗಳ ಜತೆ ಮಾತನಾಡಿದರೆ ಸಂಕಷ್ಟ ಬಗೆಹರಿಯಲಿದೆ ಎಂದರು.ಕಾವೇರಿ ವಿವಾದದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ಮಾತುಕತೆ ನಡೆಸಲಿ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ರಾಜಕೀಯ ಪ್ರವೇಶ ವಿಚಾರ: ನಾನು ರಾಜಕೀಯಕ್ಕೆ ಬರುವುದಿಲ್ಲ. ನನಗೆ ಸಿನಿಮಾ ಕ್ಷೇತ್ರದಲ್ಲಿ ಸಂತೃಪ್ತಿ ಇದೆ. ಅಷ್ಟೇ ಸಾಕು. ಗೀತಾ ಶಿವರಾಜ್ ಕುಮಾರ್ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಇರಲಿದ್ದಾರೆ. ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೋ ಗೊತ್ತಿಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುತ್ತಾರೆ. ಅವರ ಜತೆ ನಾನಿರುತ್ತೇನೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ನನಗೆ ಪ್ರಶಸ್ತಿ ದೊರೆತಿರುವುದು ಸಂತೋಷದ ವಿಚಾರ. ಅಷ್ಟೇ ಸಂಭ್ರಮದಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ ಎಂದು ಸಂತಸ ಹಂಚಿಕೊಂಡ ನಟ, ಘೋಸ್ಟ್ ಚಲನಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ವಿಭಿನ್ನ ಮಾದರಿಯ ಚಿತ್ರವನ್ನು ಕನ್ನಡಿಗರು ಸ್ವೀಕರಿಸಿರುವುದು ಖುಷಿ ವಿಚಾರ. ಜನರ ಪ್ರೋತ್ಸಾಹ ಸಿಕ್ಕರೆ ಒಳ್ಳೆಯ ಸಿನಿಮಾ ಮಾಡಲು ಸಾಧ್ಯ. ಮಾಮೂಲಿ ಚಲನಚಿತ್ರ ಮಾಡೋದು ಬೇರೆ, ಇಂತಹ ಸಿನಿಮಾ ಬೇರೆ. ಹೊರರಾಜ್ಯದಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಕೆಜಿಎಫ್, ಕಾಂತಾರ, ವೇದ ಸಿನಿಮಾ ಒಂದು ಮಟ್ಟಕ್ಕೆ ತಲುಪಿತ್ತು. ಘೋಸ್ಟ್ ಕೂಡ ದೊಡ್ಡ ಮಟ್ಟಕ್ಕೆ ಹೋಗುತ್ತಿದೆ ಎಂದರು.
ಕಾವೇರಿ ವಿಚಾರದಲ್ಲಿ ರೈತರ ಪರ ಸದಾಕಾಲ ನಿಲ್ಲುತ್ತೇವೆ. ಹೋರಾಟದ ಮೂಲಕ ಆಳುವ ಸರ್ಕಾರದ ಮೇಲೆ ಒತ್ತಡ ತರಬೇಕು. ಯಾವ ರೀತಿ ಒತ್ತಡ ತರಬೇಕು ಎಂಬುದರ ಬಗ್ಗೆ ಎಲ್ಲರೂ ಕುಳಿತು ತೀರ್ಮಾನ ಮಾಡಿದರೆ ಒಳ್ಳೆಯದು. ಕನ್ನಡಿಗರ ಹೋರಾಟ ದೊಡ್ಡ ಮಟ್ಟದ್ದಾಗಿರಬೇಕು. ಬೆಂಕಿ ಹಚ್ಚಿ ಆಕ್ರೋಶ ಮಾಡುವುದಲ್ಲ. ಎಲ್ಲರಿಗೂ ಕಿಚ್ಚು ಇರುತ್ತೆ, ತಾಳ್ಮೆಯಿಂದ ಹೋರಾಟ ಮಾಡಬೇಕು. ನಾನೊಬ್ಬ ಕಲಾವಿದ, ಹಿರಿಯರೆಲ್ಲ ಒಗ್ಗೂಡಿ ರೈತರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂದು ಹೇಳಿದರು.