ದೊಡ್ಡಣ್ಣಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದಲ್ಲಿ ಸಾಂಸ್ಕೃತಿಕ ವೈಭವ

ದೊಡ್ಡಣ್ಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಜಾನಪದ ಭಾವಗೀತೆ ಸಂಗೀತ ಗಾನ, ಸಾಂಸ್ಕೃತಿಕ ನೃತ್ಯ ಕಲಾ ಬಳಗ ಕುಂಜಿಬೆಟ್ಟು ಅವರಿಂದ ಕರಗ ನೃತ್ಯ, ಯಕ್ಷ ನೃತ್ಯ, ಜಾನಪದ ನೃತ್ಯ ಹಾಗೂ ವಿಶೇಷ ಪಟ ನೃತ್ಯ, ಕೊರವಂಜಿ ನೃತ್ಯ ಜೊತೆಗೆ ಸ್ಥಳೀಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಿತು.

ಕಲಾ ಪ್ರಕಾರಗಳ ಸಂಸ್ಥೆ ಕಲಾ ನಿಧಿ ತಂಡದ ದಶಮಾನೋತ್ಸವ ಅಂಗವಾಗಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಜಾನಪದ-ಭಾವಗೀತೆ ಸಂಗೀತ ಸೌರಭ ಕಾರ್ಯಕ್ರಮ ಸಂದರ್ಭ ಕ್ಷೇತ್ರದ ಸ್ವಾತಿ ಆಚಾರ್ಯ ಇವರನ್ನು ‘ನಾಟ್ಯ ನಿಧಿ’ ಬಿರುದು ನೀಡಿ ಸನ್ಮಾನಿಸಲಾಯಿತು.

ಕಲಾನಿಧಿ ತಂಡದ ಮುಖ್ಯಸ್ಥೆ ಉಪ್ಪೂರು ಭಾಗ್ಯಲಕ್ಷ್ಮಿ ಅವರು ಸನ್ಮಾನಿಸಿ ಶುಭಹಾರೈಸಿದರು.

ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ, ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಉಷಾ ರಮಾನಂದ, ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್, ನಾಗರಾಜ್ ಆಚಾರ್ಯ, ಪ್ರಣಮ್ಯ ಹಾಗೂ ಕಲಾನಿಧಿ ತಂಡದ ಸಹ ಕಲಾವಿದರು ಉಪಸ್ಥಿತರಿದ್ದರು.