500 ಜನ ಬಲಿ : ಗಾಜಾದ ಅಲ್-ಅಹ್ಲಿ ಸಿಟಿ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ

ಜೆರುಸಲೇಂ: ಗಾಜಾದಲ್ಲಿ ಭಯಾನಕ ಘಟನೆಯೊಂದು ಜರುಗಿದೆ.ಇಸ್ರೇಲ್ ವೈಮಾನಿಕ ದಾಳಿ ಮಾಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹಮಾಸ್ ಗುಂಪು ಆರೋಪಿಸಿದೆ. ಗಾಜಾ ನಗರದ ಅಲ್ ಅಹ್ಲಿ ಆಸ್ಪತ್ರೆ ಮೇಲೆ ಈ ದಾಳಿ ನಡೆದಿದೆ. ದಶಕಗಳಿಂದ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದಲ್ಲಿ ಇದು ಅತ್ಯಂತ ಭೀಕರ ಘಟನೆಯಾಗಿದೆ. ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಪರಿಣಾಮ 500 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಗಾಜಾ ಅಲ್-ಅಹ್ಲಿ ಸಿಟಿ ಆಸ್ಪತ್ರೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 500 ಜನರು ಸಾವನ್ನಪ್ಪಿದ್ದಾರೆ.

”ಗಾಜಾದಲ್ಲಿನ ಆಸ್ಪತ್ರೆಯ ಮೇಲೆ ಇಸ್ರೇಲ್​ ವೈಮಾನಿಕ ದಾಳಿಗೆ ಸಂಬಂಧಿಸಿದ ಸಂಭವನೀಯ ವರದಿಗಳು ಪರಿಶೀಲನೆಯಲ್ಲಿವೆ” ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ಡೇನಿಯಲ್ ಹಗರಿ ಎಂದು ಹೇಳಿದ್ದಾರೆ. ಮತ್ತೊಂದೆಡೆ ಉತ್ತರ ಗಾಜಾದಲ್ಲಿರುವ ಎಲ್ಲ ಜನರನ್ನು ದಕ್ಷಿಣ ಗಾಜಾಕ್ಕೆ ಹೋಗುವಂತೆ ಆದೇಶಿಸಿದ ಇಸ್ರೇಲ್, ಅಲ್ಲಿ ಬಾಂಬ್ ದಾಳಿ ನಡೆಸುತ್ತಿದೆ. ಮಂಗಳವಾರದಂದು ದಕ್ಷಿಣ ಗಾಜಾದ ಮೇಲೆ ನಡೆದ ದಾಳಿಯಲ್ಲಿ ಹಲವು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದರು. ಅವರಲ್ಲಿ ಉತ್ತರ ಗಾಜಾದಿಂದ ವಲಸೆ ಬಂದವರು ಇದ್ದಾರೆ. ಮಂಗಳವಾರ ಲೆಬನಾನ್ ಗಡಿಯಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಘರ್ಷಣೆಯೂ ನಡೆದಿತ್ತು. ತೀವ್ರ ಸಂಕಷ್ಟದಲ್ಲಿರುವ ಗಾಜಾಕ್ಕೆ ನೆರವು ನೀಡಲು ಮಧ್ಯವರ್ತಿಗಳ ಪ್ರಯತ್ನ ಮುಂದುವರಿದಿದೆ. ಗಾಜಾಕ್ಕೆ ಮಾನವೀಯ ನೆರವು ನೀಡುವಲ್ಲಿ ಸಹಕಾರ ಕೋರಿ ರಷ್ಯಾ ಮಂಡಿಸಿದ ನಿರ್ಣಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೋಲಾಗಿದೆ..

ಸೋಮವಾರ ಗಾಜಾ ಸಿವಿಲ್ ಡಿಫೆನ್ಸ್‌ನ ಪ್ರಧಾನ ಕಚೇರಿಯ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 10 ವೈದ್ಯರು ಮತ್ತು ಏಳು ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸೋಮವಾರ ರಾತ್ರಿ ಗಾಜಾದಲ್ಲಿ 200 ಕ್ಕೂ ಹೆಚ್ಚು ಹಮಾಸ್ ನೆಲೆಗಳ ಮೇಲೆ ದಾಳಿ ನಡೆಸಲಾಯಿತು. ತನ್ನ ನೌಕಾಪಡೆ ಹಮಾಸ್ ಮೇಲೆ ದಾಳಿ ಆರಂಭಿಸಿದೆ ಎಂದು ಇಸ್ರೇಲ್ ತಿಳಿಸಿತ್ತು. ಹಮಾಸ್ ಸೂರಾ ಕೌನ್ಸಿಲ್‌ನ ಮುಖ್ಯಸ್ಥ ಒಸಾಮಾ ಮಜಿನಿ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಮಂಗಳವಾರ ಮಧ್ಯ ಗಾಜಾದ ಮೇಲೆ ಇಸ್ರೇಲಿ ಪಡೆ ನಡೆಸಿದ ದಾಳಿಯಲ್ಲಿ ಉನ್ನತ ಕಮಾಂಡರ್ ಅಯ್ಮನ್ ನೊಫಲ್ ಮೃಪಟ್ಟಿದ್ದಾರೆ ಎಂದು ಹಮಾಸ್ ಘೋಷಿಸಿತು. ಉತ್ತರ ಗಾಜಾದ ಮೇಲೆ ದಾಳಿ ಮಾಡಲು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಇಸ್ರೇಲ್​ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

”ಗಾಜಾ ನಗರದ ಆಸ್ಪತ್ರೆಯೊಂದರ ಮೇಲೆ ಮಂಗಳವಾರ ಇಸ್ರೇಲ್​ ನಡೆಸಿದ ವೈಮಾನಿಕ ದಾಳಿಯಲ್ಲಿ ನೂರಾರು ಜನರ ಪ್ರಾಣವನ್ನು ಬಲಿತೆಗೆದುಕೊಂಡಿದೆ” ಎಂದು ಹಮಾಸ್ ನಡೆಸುತ್ತಿರುವ ಎನ್‌ಕ್ಲೇವ್‌ನಲ್ಲಿರುವ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅಲ್-ಅಹ್ಲಿ ಅಲ್-ಅರಬಿ ಆಸ್ಪತ್ರೆಯಲ್ಲಿ ನಡೆದ ಸ್ಫೋಟದಲ್ಲಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ನಾಗರಿಕ ರಕ್ಷಣಾ ಮುಖ್ಯಸ್ಥ ಅಲ್-ಜಜೀರಾ ಟಿವಿಗೆ ಹೇಳಿದ್ದಾರೆ. ಇನ್ನು ಗಾಜಾ ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ, ಕನಿಷ್ಠ 500 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ.

ಲೆಬನಾನ್ ಗಡಿಯಲ್ಲಿ ಇಸ್ರೇಲ್​ ವಾಯುಪಡೆಯು ಲೆಬನಾನ್‌ನಲ್ಲಿ ಹೆಜ್ಬುಲ್ಲಾದ ಪ್ರಮುಖ ಗುರಿಗಳ ವಿರುದ್ಧ ವೈಮಾನಿಕ ದಾಳಿ ನಡೆಸಿತು. ಮಂಗಳವಾರ ಬೆಳಗ್ಗೆ ಲೆಬನಾನ್‌ನಿಂದ ಉಡಾವಣೆಗೊಂಡ ಟ್ಯಾಂಕ್ ವಿರೋಧಿ ಕ್ಷಿಪಣಿ ಮೆಟುಲಾ ಪಟ್ಟಣದಲ್ಲಿ ಇಳಿಯಿತು. ಬಾಂಬ್‌ಗಳ ಮೂಲಕ ಗಡಿ ಗೋಡೆಯನ್ನು ಧ್ವಂಸಗೊಳಿಸಲು ಯತ್ನಿಸಿದ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೂವರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ದಕ್ಷಿಣ ಗಾಜಾದ ಮೇಲೆ ವೈಮಾನಿಕ ದಾಳಿ: ಮಂಗಳವಾರ, ಇಸ್ರೇಲ್ ದಕ್ಷಿಣ ಗಾಜಾದ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು. ಈಗಾಗಲೇ ಉತ್ತರ ಗಾಜಾದಿಂದ ಜನರು ದಕ್ಷಿಣ ಗಾಜಾಕ್ಕೆ ವಲಸೆ ಬಂದಿದ್ದಾರೆ. ರಫಾ ಮತ್ತು ಖಾನ್ ಯೂನಿಸ್ ಪಟ್ಟಣಗಳ ಹೊರವಲಯದಲ್ಲಿ ವೈಮಾನಿಕ ದಾಳಿಗಳು ನಡೆದಿವೆ. ಈ ದಾಳಿಗಳಿಂದ ರಫಾದಲ್ಲಿ 27 ಮತ್ತು ಖಾನ್ ಯೂನಿಸ್‌ನಲ್ಲಿ 30 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಗೆ 50 ಮೃತದೇಹಗಳು ಬಂದಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ದೇರ್ ಅಲ್-ಬಾಲಾ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗಿದೆ ಎಂದು ಇಸ್ರೇಲ್ ಬಹಿರಂಗಪಡಿಸಿದೆ