ಖಡ್ಗಕ್ಕಿಂತ ಹರಿತದ ಲೇಖನಿಯಲ್ಲ, ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ 20 ಅಡಿ ಉದ್ದದ ಲೇಖನಿ!!

ಸಾಗರ: ಸಾಗರದ ಆವಿನಹಳ್ಳಿಯ ಗಣೇಶ್ ಹಾರ್ಡ್​ವೇರ್ ಮತ್ತು ಜೈಗಣೇಶ್ ವುಡ್​ವರ್ಕ್ ಮಾಲೀಕ, ಕುಶಲಕರ್ಮಿ ಕೃಷ್ಣಮೂರ್ತಿ ಆಚಾರ್ ಅವರು ತಯಾರಿಸಿರುವ ಈ ಪೆನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪ್ರವೇಶಗಿಟ್ಟಿಸಿದೆ.

ಹತ್ತು ವರ್ಷಗಳ ಹಿಂದೆ ತಯಾರಿಸಿರುವ ಈ ಪೆನ್ನು 20 ಅಡಿ ಉದ್ದವಿದೆ.

ಈ ಲೇಖನಿ ಭಾರತದಲ್ಲೇ ದಾಖಲೆ ಬರೆದಿದೆ. ಅರ್ಥಾತ್, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ತಯಾರಾದ ಈ 20 ಅಡಿ ಉದ್ದದ ಲೇಖನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ ಸಿಕ್ಕಿದೆ.

ನವದೆಹಲಿಯಲ್ಲಿ ಶನಿವಾರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ ನಲ್ಲಿ ಇದನ್ನು ದಾಖಲಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲೇಖನಿಯನ್ನು ಸಾಹಿತ್ಯ ಸಮ್ಮೇಳನ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿತ್ತು.

ವಿಶ್ವಕರ್ಮಾ ಎನ್ನುವ ಹೆಸರಿನಲ್ಲಿ ಈ ಬೃಹತ್ ಪೆನ್ ಅನ್ನು ಕೃಷ್ಣಮೂರ್ತಿ ಆಚಾರ್ ಅವರು ಹೈಬ್ರೀಡ್ ಅಕೇಶಿಯಾ ಕಟ್ಟಿಗೆಯನ್ನು ಉಪಯೋಗಿಸಿ ಸುಮಾರು 15 ದಿನಗಳ ನಿರಂತರ ಶ್ರಮದಿಂದ ಸಿದ್ಧಪಡಿಸಿದ್ದಾರೆ. ಈ ವಿಶೇಷವಾದ ಲೇಖನಿಯನ್ನು ಗಿನ್ನೆಸ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್​ಗೆ ಕಳಿಸಲಾಗಿತ್ತು. ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಪೆನ್​ಗೆ ಸ್ಥಾನ ಸಿಕ್ಕಿದೆ.