ಅವಸಾನದತ್ತ ಪ್ಯಾಲೆಸ್ಟೈನ್​ನ ತಂತ್ರಜ್ಞಾನ-ಸ್ಟಾರ್ಟ್ ಅಪ್ ಉದ್ಯಮ : ಯುದ್ಧದ ಎಫೆಕ್ಟ್​

ಜೆರುಸಲೇಮ್​: ಇಸ್ರೇಲ್-ಹಮಾಸ್ ಯುದ್ಧದಿಂದ ಪ್ಯಾಲೆಸ್ಟೈನ್ ನಲ್ಲಿ ಈಗ ತಾನೇ ಚಿಗುರೊಡೆಯುತ್ತಿದ್ದ ತಂತ್ರಜ್ಞಾನ ಮತ್ತು ಸ್ಟಾರ್ಟ್ ಅಪ್ ಉದ್ಯಮ ಅವಸಾನದ ಅಂಚಿಗೆ ತಲುಪಿದೆ.ಇಸ್ರೇಲ್ ಮತ್ತು ಹಮಾಸ್​ ಯುದ್ಧದಿಂದ ಗಾಜಾದಲ್ಲಿ ಬೆಳೆಯುತ್ತಿದ್ದ ಉದ್ಯಮ ವಲಯ ಬಹುತೇಕ ವಿನಾಶವಾಗುವ ಭೀತಿ ಎದುರಾಗಿದೆ.ಆರ್ಥಿಕವಾಗಿ ವಿಶ್ವದಲ್ಲಿಯೇ ಅತ್ಯಂತ ಕಠಿಣ ಸವಾಲಿನ ಪರಿಸ್ಥಿತಿಗಳ ಮಧ್ಯೆ ಗಾಜಾದಲ್ಲಿ ಕೆಲ ಉನ್ನತ ದರ್ಜೆಯ ತಂತ್ರಜ್ಞಾನ ಕಂಪನಿಗಳು ಕಾರ್ಯಾಚರಣೆ ಆರಂಭಿಸಿದ್ದವು. ಆದರೆ ಸದ್ಯದ ಯುದ್ಧ ಇವುಗಳ ಪಾಲಿಗೆ ಅವಸಾನವನ್ನು ತಂದಿಟ್ಟಿದೆ. ಇತ್ತೀಚೆಗೆ ಪ್ಯಾಲೆಸ್ಟೈನ್ ಟೆಕ್ ಉದ್ಯಮ ವ್ಯವಸ್ಥೆಯಲ್ಲಿ 10 ಮಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿತ್ತು ಎಂದು ಗಾಜಾದ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹೇಳಿದ್ದಾರೆ.

ಪ್ಯಾಲೆಸ್ಟೈನ್​​ನ ಪ್ರಮುಖ ವಿಸಿ ಫಂಡ್ ಗಳಲ್ಲಿ ಒಂದಾದ ಇಬ್​ಟಿಕರ್​ ಇತ್ತೀಚೆಗೆ ತನ್ನ ಎರಡನೇ ಸುತ್ತಿನ 30 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದೆ. ಪ್ಯಾಲೆಸ್ಟೈನ್ ನಿಂದ ಹೊರಹೊಮ್ಮುತ್ತಿರುವ ಉನ್ನತ-ಬೆಳವಣಿಗೆಯ ಕಂಪನಿಗಳಲ್ಲಿ ಮೆನಾಲಿಟಿಕ್ಸ್ (ಡೇಟಾ ಅನಾಲಿಟಿಕ್ಸ್, ಇದರಲ್ಲಿ ಫ್ಲಾಟ್ 6 ಲ್ಯಾಬ್ಸ್​ ಹೂಡಿಕೆ ಮಾಡಿದೆ); ಒಲಿವರಿ (ಲಾಸ್ಟ್ ಮೈಲ್ ಲಾಜಿಸ್ಟಿಕ್ಸ್, ಫ್ಲಾಟ್ 6 ಲ್ಯಾಬ್ಸ್ ಮತ್ತು ಇಬ್ಟಿಕರ್ ಫಂಡ್); ಕೊರೆಟಾವಾ (ಉದ್ಯೋಗಿ ಮತ್ತು ಗ್ರಾಹಕ ನಿಷ್ಠೆ); ಮತ್ತು ಸೆಲೆನ್ವೊ (ಅಮೆಜಾನ್ ಪಾಲುದಾರ) ಸೇರಿವೆ.

ವೈ ಕಾಂಬಿನೇಟರ್​ ಮತ್ತು ಇತರರಿಂದ ಧನಸಹಾಯ ಪಡೆದ ಸೋಶಿಯಲ್ ಇಂಪ್ಯಾಕ್ಟ್​ ಸ್ಟಾರ್ಟ್‌ಅಪ್ ಮನಾರಾದ ಸಹ-ಸಂಸ್ಥಾಪಕ ಮತ್ತು ಸಿಇಒ ಇಲಿಯಾನಾ ಮೊಂಟಾಕ್ ಮಾತನಾಡಿ, ಗಾಜಾ ಮೇಲೆ ಈ ಹಿಂದೆ ಅನೇಕ ಬಾರಿ ಬಾಂಬ್ ದಾಳಿಗಳು ನಡೆದಿವೆ. ಆದರೆ ಈ ಬಾರಿಯ ಪರಿಸ್ಥಿತಿ ಬಹಳ ಸಂಕಷ್ಟಮಯವಾಗಿದೆ ಎಂದಿದ್ದಾರೆ.
2017 ರಲ್ಲಿ ಸೇಲ್ಸ್​ ಫೋರ್ಸ್​ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಬೆನಿಯೋಫ್ ಗಾಜಾದಲ್ಲಿ ಆರಂಭಿಸಲಾದ ಮೊದಲ ಕೋಡಿಂಗ್ ಅಕಾಡೆಮಿಯ ಸ್ಥಾಪನೆಗೆ ಕಾರಣಕರ್ತರಾಗಿದ್ದರು. ಆಲ್ಫಾಬೆಟ್ ಬೆಂಬಲಿತ ಮತ್ತೊಂದು ಕಂಪನಿ ‘ಗಾಜಾ ಸ್ಕೈ ಗೀಕ್ಸ್’ ಪ್ಯಾಲೆಸ್ಟೈನ್ ನಲ್ಲಿ ಆರಂಭಿಕ ಹೂಡಿಕೆಗಳು, ತರಬೇತಿ ಮತ್ತು ತಂತ್ರಜ್ಞಾನ ಸಂಪನ್ಮೂಲಗಳನ್ನು ಒದಗಿಸುತ್ತದೆ. 2022 ರಲ್ಲಿ ವೆಸ್ಟ್ ಬ್ಯಾಂಕ್ ಮತ್ತು ಗಾಜಾದಾದ್ಯಂತದ 5,000 ಕೋಡರ್​ಗಳು ಮತ್ತು ಡೆವಲಪರ್​ಗಳು ಈ ಕಂಪನಿಯಿಂದ ಪದವಿ ಪಡೆದುಕೊಂಡಿದ್ದಾರೆ.

ಮನಾರಾ ಗಾಜಾದಲ್ಲಿ ಸುಮಾರು 100 ಸಾಫ್ಟ್​ವೇರ್ ಎಂಜಿನಿಯರುಗಳನ್ನು ಹೊಂದಿದೆ. ಇದರಲ್ಲಿ ಕೆಲವರು ಯುಎಸ್ ಮತ್ತು ಯುರೋಪಿನ ಸಿಲಿಕಾನ್ ವ್ಯಾಲಿಯ ಟೆಕ್ ಕಂಪನಿಗಳಿಗಾಗಿ ದೂರದಿಂದಲೇ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಗಾಜಾದಲ್ಲಿನ ಬಹುತೇಕ ಜನರಿಗೆ ಸೆಲ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆ. ಇನ್ನು ಕೆಲವರಿಗೆ 2ಜಿ ಸ್ಪೀಡ್​​ನ ಇಂಟರ್​ನೆಟ್​ ಮಾತ್ರ ಸಿಗುತ್ತಿದೆ.”ಇಡೀ ಗಾಜಾ ಪಟ್ಟಿ ಪ್ರದೇಶದಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಮನಾರ್ಹ ಪ್ರಮಾಣದ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ ಐಎಸ್​ಪಿಗಳು ಮತ್ತು ಸೆಲ್ ಫೋನ್ ಟವರ್​ಗಳನ್ನು ಹೊಂದಿರುವ ಅನೇಕ ಎತ್ತರದ ಅಪಾರ್ಟ್​ಮೆಂಟ್​ ಕಟ್ಟಡಗಳ ಮೇಲೆ ದಾಳಿ ನಡೆದಿದೆ. ಇಡೀ ಮಧ್ಯಮ ವರ್ಗದ ಪ್ರದೇಶಗಳು ನಾಶವಾಗುತ್ತಿವೆ. ತಂತ್ರಜ್ಞಾನ ಉದ್ಯಮ ಇನ್ನು ಗಾಜಾದಲ್ಲಿ ಕೆಲಸ ಮಾಡುವುದು ಸಾಧ್ಯವಾಗದ ಸ್ಥಿತಿ ಎದುರಾಗಿದೆ” ಎಂದು ಅವರು ಮಾಧ್ಯಮಗಳಿಗೆ ಹೇಳಿದರು.