ಅಹಮದಾಬಾದ್ (ಗುಜರಾತ್):ಸಾಂಪ್ರದಾಯಿಕ ಬದ್ಧವೈರಿ ಪಾಕಿಸ್ತಾನಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನ ನೀಡಿದೆ. ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023ರ 12ನೇ ಪಂದ್ಯ ಇದಾಗಿದ್ದು, ಈ ಹೈವೋಲ್ಟೇಜ್ ಪಂದ್ಯದ ವೀಕ್ಷಣೆಗೆ ಪ್ರಪಂಚವೇ ಕಾದು ಕುಳಿತಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಕದನ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆರಿಸಿಕೊಂಡಿದೆ.ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ 2023ರ ಏಕದಿನ ವಿಶ್ವಕಪ್ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ರೋಹಿತ್ ಪಡೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ಈಗಾಗಲೇ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧ ಗೆಲುವು ಪಡೆದಿದ್ದು, ಪಾಕ್ ತಂಡವನ್ನು ಮಣಿಸಿ ಹ್ಯಾಟ್ರಿಕ್ ಗೆಲುವಿಗಾಗಿ ಕಾಯುತ್ತಿದೆ. ಅದೇ ರೀತಿ ಬಾಬರ್ ಅಜಮ್ ಪಡೆಯ ಪಾಕ್ ತಂಡ ಕೂಡ ಈಗಾಗಲೇ ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ತಂಡಗಳನ್ನು ಮಣಿಸಿ ಟೀಂ ಇಂಡಿಯಾವನ್ನು ಎದುರು ನೋಡುತ್ತಿದೆ. ಉಭಯ ತಂಡಗಳು ಎರಡು ಪಂದ್ಯಗಳನ್ನು ಗೆದ್ದಿದ್ದರಿಂದ ನೆಟ್ ರನ್ ರೇಟ್ ಹಾಗೂ ಅಂಕಪಟ್ಟಿಯಲ್ಲಿ ಹೆಚ್ಚು ಕಡಿಮೆ ಸಮಬಲದಲ್ಲಿವೆ.
ಸತತ ಗೆಲುವಿನೊಂದಿಗೆ ಏಕದಿನ ವಿಶ್ವಕಪ್ ಅಭಿಯಾನ ಆರಂಭಿಸಿರುವ ಉಭಯ ತಂಡಗಳು, ಇಂದಿನ ಪಂದ್ಯದ ಮೇಲೂ ಕಣ್ಣಿಟ್ಟಿವೆ. ಮೊದಲೇ ಹೈವೋಲ್ಟೇಜ್ ಪಂದ್ಯವಾಗಿತ್ತು. ಗೆಲ್ಲುವ ಬಲಾಬಲದಿಂದ ಇಂದಿನ ಪಂದ್ಯ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಪಂದ್ಯದ ವೀಕ್ಷಣೆಗೆ ಇಡೀ ಜಗತ್ತೇ ಸಾಕ್ಷಿಯಾಗಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂ ಭರ್ತಿಯಾಗಿದೆ. ಎಲ್ಲಿ ನೋಡಿದರೂ ಟೀಂ ಇಂಡಿಯಾ ತಂಡದ ಜರ್ಸಿ, ಟಿ ಶರ್ಟ್‌ಗಳನ್ನು ಧರಿಸಿರುವ ಕ್ರಿಕೆಟ್ ಅಭಿಮಾನಿಗಳೇ ಕಾಣುತ್ತಿದ್ದಾರೆ.
ಇಂದಿನ ಪಂದ್ಯಕ್ಕಾಗಿ ಭಾರೀ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಹೋಟೆಲ್ ಮತ್ತು ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಇತರಡೆ ಒಟ್ಟು 700ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜ್ಞಾನೇಂದ್ರ ಸಿಂಗ್ ಮಲಿಕ್ ಮಾಹಿತಿ ನೀಡಿದ್ದಾರೆ.ವಿಶ್ವಕಪ್ನಲ್ಲಿ ಉಭಯ ತಂಡಗಳು ಇದುವರೆಗೂ ಏಳು ಬಾರಿ ಮುಖಾಮುಖಿಯಾಗಿದ್ದು, ಭಾರತವೇ ಮೇಲುಗೈ ಸಾಧಿಸಿದೆ. ವಿಶ್ರಾಂತಿಯಲ್ಲಿದ್ದ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಮತ್ತೆ ಆಗಮಿಸಿದ್ದರಿಂದ ತಂಡಕ್ಕೆ ಬಲ ಬಂದಂತಾಗಿದೆ. ಇನ್ನು 2021ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ, ಭಾರತವನ್ನು ಮಣಿಸಿದ್ದರಿಂದ ಆ ಇತಿಹಾಸವನ್ನು ಮತ್ತೆ ಸೃಷ್ಟಿಸುವ ಉತ್ಸಾಹದಲ್ಲಿದೆ. ಎರಡೂ ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಫಿಟ್ ಆಯಂಡ್ ಫೈನ್ ಆಗಿದ್ದು ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಅಹಮದಾಬಾದ್‌ನಲ್ಲಿ ಹವಾಮಾನ ಹೇಗಿದೆ?: ಅಹಮದಾಬಾದ್‌ನಲ್ಲಿ ಇಂದು ಮಳೆಯ ಸಾಧ್ಯತೆ ತೀರಾ ಕಡಿಮೆ ಆಗಿದೆ. ಆದರೆ, ಅಹಮದಾಬಾದ್‌ನ ಹವಾಮಾನ ಕೇಂದ್ರದ ಪ್ರಕಾರ, ಪಂದ್ಯದ ಸಮಯದಲ್ಲಿ ಗಂಟೆಗಟ್ಟಲೆ ಮೋಡ ಕವಿದ ವಾತಾವರಣ ಇರುತ್ತದೆ. ತಾಪಮಾನ 30-35 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಹುಮಿಡಿಟಿ ಶೇ. 50 ಪ್ರತಿಶತದಷ್ಟು ಇರಬಹುದೆಂದು ನಿರೀಕ್ಷಿಸಲಾಗಿದೆ, ಆದರೆ, ದಿನದ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ವರೆಗೆ ತಲುಪುತ್ತದೆ.
ತಂಡಗಳು: ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಪಾಕಿಸ್ತಾನ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.ಕ್ರಿಕೆಟ್ ತಾರೆಯರು ಸೇರಿದಂತೆ ಸಿನಿಮಾ ನಟರು ಕೂಡ ಇಂದಿನ ಪಂದ್ಯದ ವೀಕ್ಷಣೆಗೆ ಸಾಕ್ಷಿಯಾಗಲಿದ್ದಾರೆ. ಇಂಡಿಯಾ-ಪಾಕಿಸ್ತಾನ ಮ್ಯಾಚು ಜೊತೇಲಿ ನಾನು. ಇದ್ಕಿಂತ ಹಬ್ಬ ಬೇಕಾ? ಎಂದು ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಶೀರ್ಷಿಕೆ ಬರೆದುಕೊಂಡಿದ್ದಾರೆ.