ಬೆಂಗಳೂರು: ಪರಮಶಿವಯ್ಯ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ನೇತೃತ್ವದ ಏಕಸದಸ್ಯ ಅರ್ಜಿಯನ್ನು ಪುರಸ್ಕರಿಸಿದ್ದು, ಜಾಮೀನು ನೀಡಿದೆ.ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ದಾಖಲಾಗಿದ್ದ ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಮಠದ ವಿದ್ಯಾಪೀಠಗಳ ಕಾರ್ಯದರ್ಶಿ ಪರಮಶಿವಯ್ಯ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಮುರುಘಾ ಶರಣರ ವಿರುದ್ಧದ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪರಮಶಿವಯ್ಯಗೆ ಹೈಕೋರ್ಟ್ ಜಾಮೀನು ನೀಡಿದೆ. ವಿಸ್ತೃತ ಆದೇಶ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಅಲ್ಲದೇ, ಅರ್ಜಿದಾರರು ಎರಡು ಲಕ್ಷ ರೂಪಾಯಿ ಮೌಲ್ಯದ ಬಾಂಡ್, ಇಬ್ಬರ ಭದ್ರತೆ ಠೇವಣಿ ನೀಡಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ನ್ಯಾಯಪೀಠ ವಿಧಿಸಿದೆ.
ಮುರುಘಾ ಮಠದ ಹಾಸ್ಟೆಲ್ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯರು ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಶಿವಮೂರ್ತಿ ಶರಣರ ಮತ್ತು ಪರಮಶಿವಯ್ಯ ಸೇರಿದಂತೆ ಐವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಮೈಸೂರಿನ ಒಡನಾಡಿ ಸಂಸ್ಥೆಯ ನೆರವಿನಿಂದ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದಲ್ಲಿ ಪೊಲೀಸರು ಪೋಕ್ಸೋ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ನಿಯಂತ್ರಣ) ಕಾಯಿದೆ ಅಡಿ ಶಿವಮೂರ್ತಿ ಶರಣರು, ಪರಮಶಿವಯ್ಯ ಸೇರಿ ಐವರ ವಿರುದ್ಧ ಪ್ರಕರಣ ದಾಖಲಿಸಿ, ಈ ಆ ಪ್ರಕರಣವನ್ನು ಚಿತ್ರದುರ್ಗದ ಗ್ರಾಮೀಣ ಠಾಣೆಗೆ ವರ್ಗಾಯಿಸಿದ್ದರು. ಆ ನಂತರ ಆರೋಪಿಗಳನ್ನು ಬಂಧಿಸಲಾಗಿತ್ತು.
ಇದಾದ ನಂತರ ಮತ್ತಿಬ್ಬರು ವಿದ್ಯಾರ್ಥಿನಿಯರು ನೀಡಿದ ದೂರಿನ ಅನ್ವಯ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ಪರಮಶಿವಯ್ಯ ಅವರು ಆರೋಪಿಯಾಗಿದ್ದರು. ತದನಂತರ ಎರಡನೇ ಪ್ರಕರಣದಲ್ಲಿ ಆರೋಪ ಪಟ್ಟಿಯಿಂದ ಪರಮಶಿವಯ್ಯ ಅವರನ್ನು ಕೈಬಿಡಲಾಗಿದೆ. ಮಕ್ಕಳ ಮೇಲೆ ಸ್ವಾಮೀಜಿ ಅತ್ಯಾಚಾರ ಎಸಗಲು ಪರಮಶಿವಯ್ಯ ನೆರವಾಗಿದ್ದಾರೆ ಎಂಬುದು ಅವರ ಮೇಲಿನ ಆರೋಪವಾಗಿದೆ.