ಇಸ್ರೇಲ್ – ಹಮಾಸ್ ಯುದ್ಧ: ಗಾಜಾಪಟ್ಟಿ ಮೇಲೆ 6000 ಬಾಂಬ್‌ ಎಸೆದ ಇಸ್ರೇಲ್​ ವಾಯುಪಡೆ

ಹೈದರಾಬಾದ್ : ಇಸ್ರೇಲ್ – ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ ಗಾಜಾದ ಮೇಲೆ ಸುಮಾರು 6,000 ಬಾಂಬ್‌ಗಳನ್ನು ಹಾಕಲಾಗಿದೆ ಎಂದು ಇಸ್ರೇಲಿ ಸೇನೆ ಹೇಳಿದೆ. ಅಂದರೆ ಕಳೆದ ಆರು ದಿನಗಳಿಂದ ಇಸ್ರೇಲ್ ದಿನಕ್ಕೆ ಕನಿಷ್ಠ ಒಂದು ಸಾವಿರ ಬಾಂಬ್‌ಗಳನ್ನು ಹಾಕಿದೆ.ಇಸ್ರೇಲ್ – ಹಮಾಸ್ ಯುದ್ಧ ಮುಂದುವರೆದಿದೆ. ಯುದ್ಧ ಘೋಷಿಸಿದ ದಿನದಿಂದ ಗಾಜಾದ ಮೇಲೆ ಸುಮಾರು 6,000 ಬಾಂಬ್‌ಗಳನ್ನು ಹಾಕಲಾಗಿದೆ ಎಂದು ಇಸ್ರೇಲ್​ ಸೇನೆ ಹೇಳಿದೆ.

ಅಕ್ಟೋಬರ್ 7 ರಂದು ಪ್ಯಾಲೆಸ್ತೀನ್‌ನ ಮೂಲಭೂತವಾದಿ ಭಯೋತ್ಪಾದಕ ಸಂಘಟನೆ ಹಮಾಸ್, ಇಸ್ರೇಲ್ ಮೇಲೆ ಸಾವಿರಾರು ಬಾಂಬ್‌ಗಳನ್ನು ಹಾರಿಸಿತ್ತು. ಈ ಅವಧಿಯಲ್ಲಿ ಹಮಾಸ್ ಭಯೋತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲ್ ಗಡಿಯನ್ನು ಪ್ರವೇಶಿಸಿ, 1200 ಕ್ಕೂ ಹೆಚ್ಚು ಜನರನ್ನು ಬರ್ಬರವಾಗಿ ಕೊಂದು ಹಾಕಿದ್ದರು. ಸಾವನ್ನಪ್ಪಿದವರಲ್ಲಿ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದ ಜನ ಸೇರಿದ್ದಾರೆ. ದಾಳಿಯ ಸಮಯದಲ್ಲಿ ಹಮಾಸ್ ಭಯೋತ್ಪಾದಕರು ಅನೇಕ ಜನರನ್ನು ಒತ್ತೆಯಾಳಾಗಿ ಸಹ ತೆಗೆದುಕೊಂಡು ಹೋಗಿದ್ದು, ಅವರಿಗಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ. ಇದಕ್ಕೆ ಪ್ರತೀಕಾರವಾಗಿ, ಇಸ್ರೇಲ್ ನಿರಂತರವಾಗಿ ಹಮಾಸ್ ಭಯೋತ್ಪಾದಕರು ಮತ್ತು ಗುಪ್ತಚರ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ.

ಇಸ್ರೇಲ್ ನೀಡಿದ ಮಾಹಿತಿ ಪ್ರಕಾರ, “ಡಜನ್‌ಗಟ್ಟಲೆ ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಗಾಜಾ ಪಟ್ಟಿಯಾದ್ಯಂತ ಹಮಾಸ್ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಸರಣಿ ದಾಳಿ ಮಾಡಿದವು. ಇದುವರೆಗೆ, ಐಎಎಫ್ ಸುಮಾರು 6,000 ಬಾಂಬ್‌ಗಳನ್ನು ಡ್ರಾಪ್​ ಮಾಡಿದೆ” ಎಂದು ಹೇಳಿದೆ. ಜೊತೆಗೆ, ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಗಾಜಾ ಪಟ್ಟಿಗೆ ವಿದ್ಯುತ್, ನೀರು ಅಥವಾ ಇಂಧನ ಸಿಗುವುದಿಲ್ಲ ಎಂದು ಇಸ್ರೇಲಿ ಇಂಧನ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

ಇಸ್ರೇಲ್​ ವಾಯುಪಡೆಯ ಹತ್ತಾರು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಗಾಜಾ ಪಟ್ಟಿಯಾದ್ಯಂತ ಆಕಾಶದಲ್ಲಿ ಹಾರುತ್ತಿವೆ. ಇಸ್ರೇಲ್​ ವಾಯುಪಡೆಯು ಹಮಾಸ್ ಮತ್ತು ಗುಪ್ತಚರ ಬಂಕರ್‌ಗಳ ಮೇಲೆ ಬಾಂಬ್‌ಗಳನ್ನು ಎಸೆಯುತ್ತಿದೆ. ಇಲ್ಲಿಯವರೆಗೆ ವಾಯುಪಡೆಯಿಂದ 6000 ಬಾಂಬ್‌ಗಳನ್ನು ಎಸೆಯಲಾಗಿದ್ದು, ಇಡೀ ಗಾಜಾ ಪಟ್ಟಿಯ ನಕ್ಷೆಯನ್ನೇ ಬದಲಾಯಿಸಲಾಗಿದೆ.

ಪ್ರಪಂಚದಾದ್ಯಂತದ ಬಹುತೇಕ ದೇಶಗಳು ಇಸ್ರೇಲ್ ಬೆಂಬಲಕ್ಕೆ ನಿಂತಿವೆ. ಹೆಚ್ಚಿನ ದೇಶಗಳ ಮುಖ್ಯಸ್ಥರು ಹಮಾಸ್ ದಾಳಿಯನ್ನು ಖಂಡಿಸಿದ್ದಾರೆ ಇನ್ನೊಂದೆಡೆ, ಇಸ್ರೇಲ್​ನಿಂದ ಭಾರತೀಯ ನಾಗರಿಕರನ್ನು ಕರೆತರಲು ‘ಆಪರೇಷನ್ ಅಜಯ್’ ಆರಂಭಿಸಲಾಗಿದೆ. ಈ ಸರಣಿಯ ಭಾಗವಾಗಿ ಇಸ್ರೇಲ್‌ನಿಂದ 212 ಭಾರತೀಯ ನಾಗರಿಕರ ಮೊದಲ ಬ್ಯಾಚ್ ಇಂದು ಬೆಳಗ್ಗೆ AI1140 ಸಂಖ್ಯೆಯ ಮೊದಲ ಚಾರ್ಟರ್ ವಿಮಾನದ ಮೂಲಕ ನವದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

ಹಮಾಸ್ ವಿರುದ್ಧ ಬಾಂಬ್ ದಾಳಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ನಿನ್ನೆ ವೈರಲ್ ಆದ ವಿಡಿಯೋದಲ್ಲಿ ಇಸ್ರೇಲ್​ ವಾಯುಪಡೆಯು ಸುರಂಗಕ್ಕೆ ಸಂಪರ್ಕ ಹೊಂದಿದ ಹಮಾಸ್ ನೆಲೆಯ ಮೇಲೆ ದಾಳಿ ಮಾಡಿತ್ತು. ಈ ಸುರಂಗವು ಕಟ್ಟಡದೊಳಗೆ ಇತ್ತು, ಇದರ ಮೂಲಕ ಹಮಾಸ್ ಭಯೋತ್ಪಾದಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಿದ್ದರು. ಆದರೆ, ನಿನ್ನೆ ಇಸ್ರೇಲಿ ವಾಯುಪಡೆ ಈ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದೆ.