ಮರುಕಳಿಸಲಿದೆ ಉಚ್ಚಿಲ ದಸರಾ ವೈಭವ: ಅ.15 ರಿಂದ 24 ರವರೆಗೆ ನವರಾತ್ರಿ ಉತ್ಸವ

ಕಾಪು: ಇಲ್ಲಿನ ಸುಪ್ರಸಿದ್ದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅ.15 ರಿಂದ 24 ರವರೆಗೆ ನವರಾತ್ರಿ ಉತ್ಸವ ಮತ್ತು ಉಚ್ಚಿಲ ದಸರಾ ನಡೆಸಲು ದ.ಕ ಮೊಗವೀರ ಮಹಾಜನ ಸಂಘ, ಕ್ಷೇತ್ರದ ಆಡಳಿತ ಸಮಿತಿ ಮತ್ತು ಕ್ಷೇತ್ರದ ಭಕ್ತರ ಬಳಗ ನಿರ್ಧರಿಸಿದೆ ಎಂದು ದ.ಕ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ.ಜಿ.ಶಂಕರ್ ತಿಳಿಸಿದರು.

ಉಚ್ಚಿಲದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನವರಾತ್ರಿ ಮತ್ತು ದಸರಾ ಪ್ರಯುಕ್ತ ಪ್ರತಿದಿನ ಬೆಳಿಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ, ಸಂಜೆ ಸಹಸ್ರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ನವದುರ್ಗೆ ಮತ್ತು ಶಾರದಾ ಮಾತೆಗೆ ತ್ರಿಕಾಲ ಪೂಜೆ, ವಿಜಯ ದಶಮಿಯಂದು ಬೃಹತ್ ಶೋಭಾಯಾತ್ರೆಯ ಮೂಲಕ ವೈಭವದ ಜಲಸ್ಥಂಭನ ನಡೆಯಲಿದೆ ಎಂದರು.

ಅ. 15 ರಂದು ಪ್ರತಿಷ್ಠೆ ಹಾಗೂ ಕಾರ್ಯಕ್ರಮ ಉದ್ಘಾಟನೆ

ಅ. 15ರ ಬೆಳಗ್ಗೆ 9.30ಕ್ಕೆ ಉಚ್ಚಿಲ ಶಾಲಿನಿ ಡಾ| ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಲಿದೆ. 10 ಗಂಟೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಚ್ಚಿಲ ದಸರಾಕ್ಕೆ ಚಾಲನೆ ನೀಡುವರು. 10.15ಕ್ಕೆ ಅನ್ನಛತ್ರ ಮತ್ತು ಅತಿಥಿಗೃಹ ಉದ್ಘಾಟನೆ, 10.30ಕ್ಕೆ ಫಲಪುಷ್ಪ ಪ್ರದರ್ಶನ, ಪುಸ್ತಕ ಮೇಳ ಹಾಗೂ ಸರಕಾರಗಳ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕೆ ಪರಿಕರಗಳ ಪ್ರದರ್ಶನ ಉದ್ಘಾಟನೆ, ಸಂಜೆ 6.15ಕ್ಕೆ ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದೆ ಎಂದರು.

ಸಾಂಸ್ಕೃತಿಕ ಕಲಾ ವೈಭವ

ಅ. 15ರಂದು ಯುವ ದಸರಾ – ನೃತ್ಯ ಸ್ಪರ್ಧೆ, ಅ. 19ರಂದು ಸಂಜೆ 4.30ರಿಂದ ವಿ| ಪವನ ವಿ. ಆಚಾರ್ ಬಳಗದವರಿಂದ 151 ವೀಣೆಗಳ ವಾದನ ‘ಶತವೀಣಾವಲ್ಲರಿ’, ಅ.20ರಂದು ಮಕ್ಕಳಿಗೆ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಅ. 21ರಂದು ರಂಗೋಲಿ ಸ್ಪರ್ಧೆ, ಮಹಿಳೆಯರ ಹುಲಿವೇಷ ಸ್ಪರ್ಧೆ, ಅ. 22ರಂದು ಚಿತ್ರಕಲಾ ಸ್ಪರ್ಧೆ ನಡೆಯಲಿವೆ.

ಅಂಬಾರಿ ಹೊತ್ತ ಆನೆ ಪ್ರತಿಕೃತಿ

ಅಂಬಾರಿ ಹೊತ್ತ ಆನೆಯ ಪ್ರತಿಕೃತಿ ಈ ಬಾರಿಯ ಉತ್ಸವಕ್ಕೆ ವಿಶೇಷ ಮೆರುಗು ನೀಡಲಿದ್ದು, ಶೋಭಾಯಾತ್ರೆಯಲ್ಲೂ ಮಿಂಚಲಿದೆ. ಮೀನುಗಾರರ ಬದುಕು, ಮಣಿಪಾಲ ಆರೋಗ್ಯ ಕಾರ್ಡ್, ಸ್ವಚ್ಛತೆ ಜಾಗೃತಿ ಸಹಿತ ಸಾಮಾಜಿಕ ಪರಿಕಲ್ಪನೆಯ ವಿವಿಧ ಟ್ಯಾಬ್ಲೋ ಗಳು ಇರಲಿವೆ.

ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಮಾತನಾಡಿ, ಡಾ. ಜಿ. ಶಂಕರ್ ಮಾರ್ಗದರ್ಶನದೊಂದಿಗೆ 2ನೇ ವರ್ಷದ ದಸರಾ ಉತ್ಸವವನ್ನು ವೈಭವದಿಂದ ನಡೆಯಲಿದ್ದು ಶೋಭಾಯಾತ್ರೆ ಸಾಗುವ ದಾರಿಯುದ್ದಕ್ಕೂ ಸಾರ್ವಜನಿಕರು ಅಂಗಡಿ, ಮನೆ, ಮಳಿಗೆಗಳನ್ನು ಸಿಂಗರಿಸುವಂತೆ ಮನವಿ ಮಾಡಿದರು.

ಆಡಳಿತ ಮಂಡಳಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್‌, ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್, ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ನಾಲ್ಕು ಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಮನೋಜ್‌ ಕಾಂಚನ್‌, ಮಹಿಳಾ ಸಭಾದ ಅಧ್ಯಕ್ಷೆ ಸುಗುಣಾ ಕರ್ಕೇರ, ಪ್ರಮುಖರಾದ ಮೋಹನ್ ಬೆಂಗ್ರೆ, ಶಂಕರ್ ಸಾಲ್ಯಾನ್, ಅನಿಲ್‌ ಕುಮಾರ್‌, ಸಂಜೀವ ಮೆಂಡನ್, ಮೋಹನ್ ಬಂಗೇರ, ದಿನೇಶ್ ಮೂಳೂರು, ರವೀಂದ್ರ ಶ್ರೀಯಾನ್‌, ಸತೀಶ್ ಅಮೀನ್ ಬಾರ್ಕೂರು, ಸತೀಶ್ ಅಮೀನ್ ಪಡುಕೆರೆ ಪತ್ರಿಕಾಗೋಷ್ಠಿಯಲ್ಲಿದ್ದರು.