ಶಿಕ್ಷಣ ಸಚಿವ ಮಧು ಬಂಗಾರಪ್ಪ : ಸರ್ಕಾರಿ ಶಾಲೆಗಳಿಗೆ 20 ಸಾವಿರ ಶಿಕ್ಷಕರ ನೇಮಕಾತಿಗೆ ನಿರ್ಧಾರ

ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಿಗೆ 20 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ.ನ್ಯಾಯಾಲಯದ ತೀರ್ಪು ಹೊರಬಂದ ನಂತರ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಕಾರ್ಯಾರಂಭವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ವಿಷಯ ತಿಳಿಸಿದರು.

ಈ ನೇಮಕಾತಿಗೆ ನ್ಯಾಯಾಲಯ ಇನ್ನೊಂದು ತಿಂಗಳಲ್ಲಿ ಅನುಮತಿ ನೀಡಿ ಆದೇಶ ಪ್ರಕಟಿಸುವ ಸಾಧ್ಯತೆಗಳಿವೆ. 20 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಒಪ್ಪಿಗೆ ದೊರೆತರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ನೇಮಕಾತಿ ಕಾರ್ಯ ಪೂರ್ಣವಾಗಲಿದೆ ಎಂದರು.

ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಿದ್ದು, ತಲಾ ಎರಡು ಗ್ರಾಮ ಪಂಚಾಯತಿಗೆ ಒಂದರಂತೆ ಒಟ್ಟು 3 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಅಲ್ಲದೆ, ಈ ವರ್ಷ 500 ರಿಂದ 600 ಶಾಲೆಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಹೈಟೆಕ್ ಮಾದರಿಯ ಈ ಶಾಲೆಗಳು ಪ್ರಾರಂಭವಾದರೆ ಮಕ್ಕಳಿಗೆ ಅನುಕೂಲವಾಗಲಿದೆ. ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲ ಬಗೆಯ ಅನುಕೂಲಗಳು ಈ ಶಾಲೆಯಲ್ಲಿರಲಿವೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 53 ಸಾವಿರ ಶಿಕ್ಷಕರ ಕೊರತೆ ಇದೆ. ಈ ಪೈಕಿ 20 ಸಾವಿರ ಶಿಕ್ಷಕರ ನೇಮಕವಾದರೆ ಬೋಧನೆಯ ವಿಷಯದಲ್ಲಿರುವ ಒತ್ತಡ ಕಡಿಮೆಯಾಗಲಿದೆ. ಈಗಾಗಲೇ 13,500 ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದೆ. ನ್ಯಾಯಾಲಯದ ತೀರ್ಪು ಹೊರಬಂದ ನಂತರ ನೇಮಕಾತಿ ಕಾರ್ಯ ಆರಂಭವಾಗಲಿದೆ.

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಎಲ್ಲ ಬಗೆಯ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಬದ್ದವಾಗಿದೆ. ಸಿಎಸ್​ಆರ್ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ನಿಧಿಯಡಿ ಈ ವರ್ಷ ಲಭ್ಯ ಆಗಲಿರುವ 2500 ಕೋಟಿ ರೂಪಾಯಿಗಳನ್ನು ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸುವ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಆಸಕ್ತಿ ತೋರಿದ್ದು, ಈ ಹಣ ಇಂತಿಂಥ ಕಾರ್ಯಗಳಿಗೆ ಬಳಕೆಯಾಗಬೇಕು ಎಂದು ನಾವು ಸೂಚಿಸುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಮಾರು 53 ಸಾವಿರ ವಿದ್ಯಾರ್ಥಿಗಳು ಕಳೆದ ಐದು ವರ್ಷಗಳಲ್ಲಿ ಅನುದಾನಿತ ಶಾಲೆಗಳಿಗೆ, ಖಾಸಗಿ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂಬ ವರದಿಯನ್ನು ಸರ್ಕಾರಿ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರು ಮತ್ತೊಂದು ಸರ್ಕಾರಿ ಶಾಲೆಗೆ ಹೋದರೆ ಬೇರೆ ಮಾತು, ಆದರೆ ಸರ್ಕಾರಿ ಶಾಲೆಯನ್ನು ತೊರೆದು ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಹೋದರೆ ನಮ್ಮ ಶಾಲೆಗಳ ಗುಣಮಟ್ಟ ಸರಿಯಿಲ್ಲ ಎಂದೇ ಅರ್ಥ. ಹೀಗಾಗಿ ಗಂಭಿರವಾಗಿ ಪರಿಗಣಿಸಲಾಗಿದೆ. ಇಂತಹ ಸಮಸ್ಯೆಗಳಿಗೆ ಈಗ ಸ್ಥಾಪಿಸಲು ನಿರ್ಧರಿಸಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್​ಗಳು ಉತ್ತರವಾಗಲಿವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.