ಉಡುಪಿ: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಅಜ್ಜರಕಾಡುವಿಗೆ ಭೇಟಿ ನೀಡಿ, ಈ ಭಾಗದ ಜನರನ್ನು ಒಂದೆಡೆ ಸೇರಿಸಿ, ಸ್ವಾತಂತ್ರ್ಯದ ಕುರಿತು ಕಾರ್ಯಕ್ರಮ ಆಯೋಜಿಸಿದ್ದು ಅವರ ನೆನಪಿಗಾಗಿ ಇಲ್ಲಿ ಗಾಂಧೀಜಿಯವರ ಪುತ್ಥಳಿಯನ್ನು ಭುಜಂಜ ಶೆಟ್ಟಿ ಪಾರ್ಕಿನಲ್ಲಿ ನಿರ್ಮಾಣ ಮಾಡಲಾಗಿದೆ. ಗಾಂಧೀಜಿಯವರ ವಿಚಾರ, ತತ್ವ ಹಾಗೂ ಆದರ್ಶಗಳನ್ನು ವಿಶ್ವದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಪಾಲಿಸಬೇಕು ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು.
ಸೋಮವಾರ ನಗರದ ಅಜ್ಜರಕಾಡು ಭುಜಂಗ ಪಾರ್ಕಿನ ಗಾಂಧಿಕಟ್ಟೆಯಲ್ಲಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನಗರಸಭೆ ಉಡುಪಿ ಇವರ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ, ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಗಾಂಧೀ ಜಯಂತಿ ಅಂಗವಾಗಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆಯೋಜಿಸಿದ್ದು, ದೇಶದ ಪ್ರತಿಮೂಲೆಯಲ್ಲೂ ಹಾಗೂ ಜಿಲ್ಲಾದ್ಯಂತ ಆಯೋಜಿಸಲಾದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಕೈಜೋಡಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈಗಾಗಲೇ ಉಡುಪಿ ನಗರವು ಸ್ವಚ್ಛತೆಗೆ ಹೆಸರುವಾಸಿಯಾಗಿದ್ದು, ಇದಕ್ಕೆ ಪೌರಕಾರ್ಮಿಕರ ಕೊಡುಗೆ ಅಪಾರ ಎಂದ ಅವರು, ಮುಂದಿನ ದಿನಗಳಲ್ಲಿ ಉಡುಪಿ ನಗರವು ಸ್ವಚ್ಛ ನಗರವಾಗುವುದರ ಮೂಲಕ ಇಡೀ
ವಿಶ್ವಕ್ಕೆ ಮಾದರಿಯಾಗಬೇಕು ಎಂದರು.
ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಕುಟುಂಬವನ್ನು ತೊರೆದು ದೇಶದ ಮೂಲೆಮೂಲೆಗಳಲ್ಲಿ ಸಂಚರಿಸಿ, ಜನರನ್ನು ಒಗ್ಗೂಡಿಸಿ, ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿಸುವುದರೊಂದಿಗೆ ಅವರು ಭೇಟಿ ನೀಡಿದ ಸ್ಥಳಗಳಲ್ಲಿ ಸ್ವತಃ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ ಎಂದರು.
ಪ್ಲೇಗ್ ಹರಡಿದ ಸ್ಥಳಗಳಲ್ಲಿ ಜನರನ್ನು ಬೇರೆ ಕಡೆ ಕಳುಹಿಸಿ, ಅಲ್ಲಿನ ಶೌಚಾಲಯ ಸ್ವಚ್ಛತೆಗೆ ಮುಂದಾಗುತ್ತಾರೆ. ಇದರಿಂದ ಅವರು ಸ್ವಚ್ಛತೆಗೆ ಎಷ್ಟು ಪ್ರಾಮುಖ್ಯತೆ ನೀಡಿದ್ದರು ಎಂದು ತಿಳಿಯುತ್ತದೆ.
ಸಾರ್ವಜನಿಕರು ಮೊದಲು ನಮ್ಮ ಮನೆಯ ಕಸವನ್ನು ನಾನು ಸ್ವಚ್ಛಗೊಳಿಸಬೇಕು ಎಂಬುದನ್ನು ಅರಿತುಕೊಳ್ಳಬೇಕು. ನಾವು ಬಿಸಾಡಿದ ಕಸವು ಚರಂಡಿಗಳ ಮೂಲಕ ನದಿ ಹಾಗೂ ಸಮುದ್ರಕ್ಕೆ ಸೇರುತ್ತದೆ. ಟನ್‌ಗಟ್ಟಲೇ ಕಸವು ಸಮುದ್ರಕ್ಕೆ ಸೇರುತ್ತದೆ. ಇದಕ್ಕೆ ಆಸ್ಪದ ನೀಡಬಾರದು ಎಂದರು.
ಉಡುಪಿ ನಗರಸಭೆ ಪುರಸಭೆ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಗಳಲ್ಲಿ ಸಾರ್ವಜನಿಕರು ಮನೆ ಮನೆಗೆ ಸಂಗ್ರಹಿಸಲು ಬರುವ ಪೌರಕಾರ್ಮಿಕರಿಗೆ ಹಸಿಕಸ ಹಾಗೂ ಒಣಕಸವನ್ನು ವಿಂಗಡಣೆ ಮಾಡಿ ನೀಡಬೇಕು. ಇದು ಪೌರಕಾರ್ಮಿಕರ ಹಾಗೂ ನಗರಸಭೆಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಇದರಿಂದ ಕಸವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯ ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಮನೆಮನೆ ಕಸವನ್ನು ನಿರ್ವಹಣೆಗೆ ಸಹಕರಿಸಿದ್ದಲ್ಲಿ ಗಾಂಧೀಜಿ ಯವರ ಸ್ವಚ್ಛತೆಯ ಕನಸಿಗೆ ಜಿಲ್ಲೆಯಾದ್ಯಂತ ನನಸು ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮಾ ಗಾಂಧೀಜಿಯವರ 154 ನೇ ಜಯಂತಿ ಅಂಗವಾಗಿ, ಪ್ರೌಢಶಾಲಾ ವಿಭಾಗ, ಪದವಿ ಪೂರ್ವ ಶಿಕ್ಷಣ ವಿಭಾಗ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಒಟ್ಟು ಮೂರು ವಿಭಾಗಗಳಲ್ಲಿ ಆಯೋಜಿಸಲಾದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿಭಾಗ ರಕ್ಷಿತಾ, ಶ್ರೇಯಾ ಹಾಗೂ ರಶ್ಮಿ, ಪದವಿ ಪೂರ್ವ ಶಿಕ್ಷಣ ವಿಭಾಗದ ದಿವ್ಯಾ, ಸೌಜನ್ಯ ಹಾಗೂ ದಕ್ಷಾ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ಸ್ವಪ್ನ ಶೇಟ್, ಹರ್ಷಿತಾ ಯು ಶೆಟ್ಟಿ ಹಾಗೂ ಅನುಷಾ ಕೆ ಪೂಜಾರಿ ಇವರುಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಹಾಗೂ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಸಾರ್ವಜನಿಕರಿಗೆ ಕೈಚೀಲಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ನಗರಸಭೆ ಪೌರಾಯುಕ್ತ ರಾಯಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕೆ, ರಶ್ಮಿ ಭಟ್, ಜಯಂತಿ ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.