ಅಮೃತಸರ (ಪಂಜಾಬ್) : ಕಾಂಗ್ರೆಸ್ ನಾಯಕ, ಲೋಕಸಭೆ ಸಂಸದ ರಾಹುಲ್ ಗಾಂಧಿ ಅವರು ಸೋಮವಾರ ಅಮೃತಸರದ ಪ್ರಸಿದ್ಧ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿ, ಸ್ವಯಂಸೇವೆಯ ಭಾಗವಾಗಿ ಭಕ್ತರು ಬಳಸಿದ ಪಾತ್ರೆಗಳನ್ನು ತೊಳೆದರು.ಇದಕ್ಕೂ ಮೊದಲು ಸಿಖ್ ಸಂಪ್ರದಾಯದಂತೆ ತಲೆಗೆ ನೀಲಿ ಬಣ್ಣದ ಬಟ್ಟೆ ಸುತ್ತಿ ದೇಗುಲದ ಗರ್ಭಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ಬಳಿಕ ಸಿಖ್ಖರ ಅತ್ಯುನ್ನತ ಸ್ಥಾನ ಅಕಾಲ್ ತಕ್ತ್ಗೆ ಭೇಟಿ ನೀಡಿದರು. ಇಂದು ರಾಹುಲ್ ಇಲ್ಲಿ ನಡೆಯುವ ಫಲ್ಕಿ ಸೇವಾದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಪಂಜಾಬ್ನ ಅಮೃತಸರದಲ್ಲಿರುವ ಸಿಖ್ಖರ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಲ್ಡನ್ ಟೆಂಪಲ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭೇಟಿ ನೀಡಿದರು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಪ್ರಕಟಿಸಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ರಾಹುಲ್ ಗಾಂಧಿ ಅವರು ನಗರಕ್ಕೆ ವೈಯಕ್ತಿಕವಾಗಿ ಭೇಟಿ ನೀಡಲಿದ್ದಾರೆ. ಸಚ್ಖಂಡ್ ಶ್ರೀ ಹರ್ಮಂದಿರ್ ಸಾಹಿಬ್ನಲ್ಲಿ ನಮನ ಸಲ್ಲಿಸಲು ಅಮೃತಸರಕ್ಕೆ ಆಗಮಿಸಲಿದ್ದಾರೆ. ಇದು ಅವರ ವೈಯಕ್ತಿಕ,ಆಧ್ಯಾತ್ಮಿಕ ಭೇಟಿಯಾಗಿದೆ. ಅವರ ಖಾಸಗಿತನವನ್ನು ಗೌರವಿಸೋಣ ಎಂದು ಮನವಿ ಮಾಡಿದ್ದರು.
ಪಂಜಾಬ್ ನ್ಯಾಯಾಲಯವು ಶಾಸಕ ಸುಖಪಾಲ್ ಸಿಂಗ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 7 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಲ್ಲಿಸಿದ್ದ ಪೊಲೀಸರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಕಳೆದ ಸೆಪ್ಟೆಂಬರ್ 28ರಂದು ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಅವರನ್ನು ಛತ್ತೀಸ್ಗಢದ ಅವರ ನಿವಾಸದಿಂದ ಪೊಲೀಸರು ಬಂಧಿಸಿದ್ದರು. ಇವರ ವಿರುದ್ಧ ಎನ್ಡಿಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಖೈರಾ ಬಂಧನವನ್ನು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಆಪ್ ಸೇಡಿನ ರಾಜಕಾರಣ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
2024ರ ಲೋಕಸಭೆ ಚುನಾವಣೆಗೆ ಪಂಜಾಬ್ನಲ್ಲಿ ಆಪ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತುಗಳು ಕೇಳಿಬಂದಿವೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸೆರೆ: 2015ರ ಡ್ರಗ್ಸ್ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪಂಜಾಬ್ನಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ತಿಕ್ಕಾಟ ಪ್ರಾರಂಭವಾಗಿದೆ. ಇದರ ನಡುವೆಯೇ ರಾಹುಲ್ ಗಾಂಧಿ ಪಂಜಾಬ್ಗೆ ಭೇಟಿ ನೀಡಿದ್ದು ಕುತೂಹಲಕಾರಿಯಾಗಿದೆ.