ಹ್ಯಾಂಗ್ಝೌ (ಚೀನಾ): ಶೂಟಿಂಗ್ ವಿಭಾಗದ ನಂತರ ಭಾರತ ಅಥ್ಲೆಟಿಕ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಈವರೆಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ 2 ಚಿನ್ನ, 6 ಬೆಳ್ಳಿ ಮತ್ತು 6 ಕಂಚು ಸೇರಿದಂತೆ 13 ಪದಕಗಳು ಬಂದಿವೆ. ಏಷ್ಯಾಡ್ನ 9ನೇ ದಿನವಾದ ಸೋಮವಾರ 3,000 ಮೀಟರ್ ಸ್ಟೀಪಲ್ಚೇಸ್ನಲ್ಲಿ ಬೆಳ್ಳಿ ಹಾಗು ಕಂಚಿನ ಪದಕ ಗೌರವ ಸಿಕ್ಕಿದೆ.
ಪಾರುಲ್ ಚೌಧರಿ 9:27.63 ಸೆಕೆಂಡ್ಗಳ ಸಮಯದಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ ಪಡೆದರು. ಚೊಚ್ಚಲ ಏಷ್ಯನ್ ಗೇಮ್ಸ್ ಆಡುತ್ತಿರುವ ಪ್ರೀತಿ 9:43.32 ಸೆಕೆಂಡ್ನಿಂದ ಮೂರನೇ ಸ್ಥಾನ ಅಲಂಕರಿಸಿದರು. ಇದು ಅವರ ವೈಯಕ್ತಿಕ ಅತ್ಯುತ್ತಮ ಸಮಯವಾಗಿದೆ. ಹಾಲಿ ವಿಶ್ವ ಚಾಂಪಿಯನ್ ಬಹ್ರೇನ್ನ ವಿನ್ಫ್ರೆಡ್ ಯಾವಿ 9:18.28 ಸೆಕೆಂಡ್ ಸಮಯದಿಂದ ಚಿನ್ನಕ್ಕೆ ಕೊರಳೊಡ್ಡಿದರು.ಒಟ್ಟಾರೆ, 13 ಚಿನ್ನ, 22 ಬೆಳ್ಳಿ ಮತ್ತು 23 ಕಂಚು ಸೇರಿ 58 ಪದಕಗಳಿಂದ ನಾಲ್ಕನೇ ಸ್ಥಾನದಲ್ಲಿದೆ.
ಭಜನ್ ಕೌರ್ ಮತ್ತು ಅಂಕಿತಾ ಭಕತ್ ಅವರು ಮಹಿಳೆಯರ ರಿಕರ್ವ್ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಲು ವಿಫಲರಾದರು. ರಿಪಬ್ಲಿಕ್ ಆಫ್ ಕೊರಿಯಾದ ಸ್ಯಾನ್ ಆನ್ ವಿರುದ್ಧದ ಪ್ರೀ ಕ್ವಾರ್ಟರ್ಫೈನಲ್ನಲ್ಲಿ ಭಜನ್ ಕೌರ್ 7-3 ರಿಂದ ಸೋತರು. ಅಂಕಿತಾ ಭಕತ್ ಇಂಡೋನೇಷ್ಯಾದ ರೆಝಾ ಆಕ್ಟೇವಿಯಾ ವಿರುದ್ಧ 6-5 ರಿಂದ ಸೋಲನುಭವಿಸಿದರು.
ಸ್ಕ್ವಾಷ್ ಸಿಂಗಲ್ಸ್- ಕ್ವಾರ್ಟರ್ ಫೈನಲ್ ಪ್ರವೇಶ: ಕುವೈತ್ನ ಅಮ್ಮಾರ್ ಅಲ್ತಮಿಮಿ ವಿರುದ್ಧ 11-4, 11-4, 11-6ರ ಅಂತರದ ದಿಂದ 16ನೇ ಸುತ್ತಿನ ಪಂದ್ಯವನ್ನು ಭಾರತದ ಸೌರವ್ ಘೋಷಲ್ ಗೆದ್ದು, ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ. ಪುರುಷರ ಗುಂಪು ಹಂತದ ಸ್ಕ್ವಾಷ್ ಗೇಮ್ನಲ್ಲಿ ಭಾರತದ ತಂಡ ಚಿನ್ನದ ಪದಕ ಗೆದ್ದುಕೊಂಡಿತ್ತು. ಜಪಾನ್ನ ರ್ಯುನೊಸುಕೆ ತ್ಸುಕು ವಿರುದ್ಧ ನಾಳೆ ಸಂಜೆ 4:30ಕ್ಕೆ (ಭಾರತೀಯ ಕಾಲಮಾನ) ಸೌರವ್ ಘೋಷಲ್ ಕ್ವಾರ್ಟರ್ ಫೈನಲ್ನಲ್ಲಿ ಆಡಲಿದ್ದಾರೆ.
ಆರ್ಚರಿ-ಪುರುಷರ ಜೋಡಿ ಕ್ವಾರ್ಟರ್ ಫೈನಲ್ಗೆ: ಪುರುಷರ ರಿಕರ್ವ್ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಭಾರತೀಯ ಆರ್ಚರ್ ಅತಾನು ದಾಸ್ 7-1 ರಿಂದ ತಜಕಿಸ್ತಾನ್ನ ರಾಬರ್ಟ್ ನಾಮ್ ವಿರುದ್ಧ ಗೆದ್ದರು. 31 ವರ್ಷದ ಅತಾನು ದಾಸ್ ನಾಳೆ ಕ್ವಾರ್ಟರ್ ಫೈನಲ್ನಲ್ಲಿ ಚೀನಾದ ಕ್ವಿ ಕ್ಸಿಯಾಂಗ್ಶುವೋ ವಿರುದ್ಧ ಸೆಣಸಲಿದ್ದಾರೆ. ಧೀರಜ್ ಬೊಮ್ಮದೇವರ ಕ್ವಾರ್ಟರ್ ಫೈನಲ್ನಲ್ಲಿ ಬಾಂಗ್ಲಾದೇಶದ ಮೊಹಮ್ಮದ್ ಹಕೀಮ್ ಅಹ್ಮದ್ ವಿರುದ್ಧ ಶೂಟ್-ಆಫ್ ಮೂಲಕ 6-5 ರಿಂದ ಗೆದ್ದಿದ್ದು, ಇಂದು ಇಲ್ಫತ್ ಅಬ್ದುಲ್ಲಿನ್ ಅವರನ್ನು ಬೊಮ್ಮದೇವರ ಎದುರಿಸಲಿದ್ದಾರೆ.